ಕಾಂಗ್ರೆಸ್ ಶಾಸಕನ ಅಕ್ರಮ ಆಸ್ತಿ, ಲೋಕಾ ತನಿಖೆ

ಸಿಆರ್ ಪಿಸಿ 156(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಜನವರಿ 9, 2013ರೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಸೂಪರಿಂಟೆಂಡ್ ಆಫ್ ಪೊಲೀಸ್ ಅವರಿಗೆ ಲೋಕಾಯುಕ್ತ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ನಿರ್ದೇಶನ ನೀಡಿದರು.
ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಬಾಬುರಾವ್ ಚಿಂಚನಸೂರ್ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಶಾಂತಪ್ಪ ಖಾನಳ್ಳಿ ಎಂಬ ವಕೀಲರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಆಗಸ್ಟ್ 24, 2012ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ (ನ.28) ನಡೆದು ಮೇಲ್ಕಂಡ ತೀರ್ಪು ಹೊರ ಬಿದ್ದಿದೆ.
ಶಾಸಕ ಬಾಬುರಾವ್ ಅವರು ಯಾದಗಿರಿ, ಗುಲ್ಬರ್ಗ, ಬೀದರ್ ನ ಹುಮ್ನಾಬಾದಿನಲ್ಲಿ ಅಲ್ಲದೆ ಬೆಂಗಳೂರಿನಲ್ಲೂ ಸಾಕಷ್ಟು ಆಸ್ತಿ ಹೊಂದಿದ್ದಾರೆ.
ಅವರು 2008ರಲ್ಲಿ ಚುನಾವಣಾ ಆಯೋಗಕ್ಕೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ ಆದಾಯದ ಮೊತ್ತಕ್ಕೂ ಇಂದಿನ ಆದಾಯಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಆದಾಯ ಮೀರಿ ಆಸ್ತಿ ಗಳಿಸಿರುವುದು ಇದರಿಂದ ಸಾಬೀತಾಗುತ್ತದೆ ಎಂದು ವಕೀಲ ಖಾನಳ್ಳಿ ಆರೋಪಿಸಿದ್ದಾರೆ.
ಇದಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಣವನ್ನು ಜನರತ್ತ ಎಸೆಯುತ್ತಿರುವ ದೃಶ್ಯಗಳಿರುವ ಚಿತ್ರಗಳನ್ನು ಅರ್ಜಿ ಜೊತೆಗೆ ದೂರುದಾರರು ಲಗತ್ತಿಸಿದ್ದಾರೆ.
2008ರಲ್ಲಿ ಬಾಬು ರಾವ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ವಿವರ ಇಲ್ಲಿದೆ:
ನಂ.125, ಶಾಂತಿ ನಗರ, ಎಂಎಸ್ ಕೆ ಮಿಲ್ ರಸ್ತೆ, ಗುಲ್ಬರ್ಗಾದ ನಿವಾಸಿಯಾದ ಬಾಬುರಾವ್ ಬಸವಣ್ಣಪ್ಪ ಚಿಂಚನಸೂರು ಎಂಬ ಹೆಸರಿನ ನಾನು ಈ ಕೆಳಗಂಡಂತೆ ಆಸ್ತಿ ಹೊಂದಿದ್ದೇನೆ...
ಚರಾಸ್ತಿ;
ನಗದು : 48,000 ರು
ವಾಹನ: ನಮೂದಿಸಿಲ್ಲ
ಆಭರಣ: 10,00,000 ರು ಮೌಲ್ಯದ ಆಭರಣಗಳು
ಒಟ್ಟಾರೆ: 10,48,000 ರು
ಸ್ಥಿರಾಸ್ತಿ ಆಸ್ತಿ;
ಕೃಷಿ ಭೂಮಿ : 29,00,000 ರು ಮೌಲ್ಯದ ಭೂಮಿ
ಇತರೆ:
ಬ್ಯಾಂಕ್ ಗಳಲ್ಲಿ ಸಾಲ: 39,85,000
ಪ್ಯಾನ್ ಕಾರ್ಡ್ ಸಲ್ಲಿಸಿಲ್ಲ. ಇವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. ವಕೀಲ ಶಾಂತಪ್ಪ ಅವರ ದೂರಿನ ಪ್ರಕಾರ ಶಾಸಕ ಬಾಬುರಾವ್ ಅವರ ಅಸ್ತಿ ಮೊತ್ತ ಮೇಲ್ಕಂಡ ದಾಖಲೆಯಲ್ಲಿ ಲೋಪವಿದೆ ಹಾಗೂ ಸಂಖ್ಯೆ ಮೀರಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications