ಚಿಕ್ಕಬಳ್ಳಾಪುರ ಟೀನೇಜರ್ಸ್ ಲವ್ ದಾರುಣ ಅಂತ್ಯ

ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳ ಪೈಕಿ ವಿದ್ಯಾರ್ಥಿನಿ ಮಾನಸ (16) ಬಸ್ ನಲ್ಲೇ ಬುಧವಾರ(ನ.28) ಮೃತ ಪಟ್ಟಿದ್ದಳು. ವಿದ್ಯಾರ್ಥಿ ಕೆಎಸ್ ಮಂಜುನಾಥ್ (17) ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದ್ದ. ಆದರೆ, ಗುರುವಾರ(ನ.29) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರದ ಪ್ರಥಮ ಪಿಯು ಕಾಲೇಜು ವಿದ್ಯಾರ್ಥಿಗಳಾದ ಇಬ್ಬರು ಚಿಕ್ಕಬಳ್ಳಾಪುರದ ನಿವಾಸಿಗಳು. ಮೊನ್ನೆ ರಾತ್ರಿ ಬೆಂಗಳೂರಿನ ವಿಜಯಾ ಬ್ಯಾಂಕ್ ಕಾಲೋನಿಯಿಂದ ಕುಂದಾಪುರದ ಬಸ್ ಹತ್ತಿದ್ದಾರೆ.
ದುರ್ಗಾಂಬಾ ಸ್ಲೀಪರ್ ಕೋಚ್ ಬಸ್ ರಾತ್ರಿ 10.30ಕ್ಕೆ ನೆಲಮಂಗಲ ತಲುಪಿದೆ. ಇಬ್ಬರು ಕುಂದಾಪುರಕ್ಕೆ ಟಿಕೆಟ್ ತೆಗೆದುಕೊಂಡು ನಂ.21-22 ರಂದು ಕುಳಿತುಕೊಂಡಿದ್ದರು.
ಬುಧವಾರ ಬೆಳಗ್ಗೆ ಬಸ್ ಕುಂದಾಪುರ ತಲುಪಿದಾಗ ಇಬ್ಬರು ಇಳಿಯದಿರುವುದನ್ನು ಕಂಡು ಚಾಲಕ ಚಂದ್ರಶೇಖರ್ ಅವರು ಹುಡುಗನನ್ನು ಎಬ್ಬಿಸಿದ್ದಾರೆ.
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಹುಡುಗ ಕೆಎಸ್ ಮಂಜುನಾಥ್ ತೂರಾಡುತ್ತಾ ಕುಸಿದು ಬಿದ್ದಿದ್ದಾನೆ. ಹುಡುಗಿ ಕೆಎಂ ಮಾನಸಾ ಎಬ್ಬಿಸಲು ಯತ್ನಿಸಿ ನೋಡಿದರೆ, ಆಕೆ ಆಗಲೇ ಕೊನೆಯುಸಿರೆಳೆದಿರುವುದು ಕಂಡು ಬಂದಿದೆ.
ತಕ್ಷಣ ಮಂಜುನಾಥನನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಮಂಜುನಾಥ್ ಕೂಡಾ ಗುರುವಾರ(ನ.29) ಮೃತಪಟ್ಟಿದ್ದಾನೆ.
ಈ ಇಬ್ಬರು ಕಾಣೆಯಾಗಿರುವ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರೇಮ ವಿವಾಹಕ್ಕೆ ಮನಯವರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ.
ಮಾನಸಾ ಕೈಯಲ್ಲಿ ಮದರಂಗಿ ಹಾಗೂ ಕೊರಳಲ್ಲಿ ಅರಿಶಿನ ದಾರ ಇದ್ದು, ಮದುವೆಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ದುರ್ಗಾಂಬಾ ಬಸ್ (ಕೆಎ.20.ಸಿ.5790) ಚಾಲಕ ಚಂದ್ರಶೇಖರ ಅವರು ನೀಡಿದ ದೂರಿನ ಅನ್ವಯ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮಾಹಿತಿ ಮೂಲ: ಅಸ್ವಾಭಾವಿಕ ಮರಣ ಸಂಖ್ಯೆ 61/2012 ಕಲಂ 174 ಸಿ.ಆರ್.ಪಿ.ಸಿ, ಕುಂದಾಪುರ ಪೊಲೀಸ್ ಠಾಣೆ












Click it and Unblock the Notifications