ಕಾವೇರಿ ವಿವಾದ: ಶೆಟ್ಟರ್- ಜಯಾ ಮಾತುಕತೆ ವಿಫಲ

ಸುಮಾರು 2 ಗಂಟೆಗಳ ಕಾಲ ನಡೆಯಬೇಕಿದ್ದ ಸಭೆ 55 ನಿಮಿಷಕ್ಕೆ ಮೊಟಕುಗೊಂಡಿದೆ. ನೀರು ಬಿಡಲು ಕರ್ನಾಟಕ ಒಪ್ಪದ ಕಾರಣ ಅರ್ಧದಲ್ಲೇ ಸಭೆಯಿಂದ ಜಯಲಲಿತಾ ಹೊರ ನಡೆದಿದ್ದಾರೆ.
ಸುಪ್ರೀಂಕೋರ್ಟ್ ಅಣತಿಯಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಕರ್ನಾಟಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾತುಕತೆ ನಡೆಸಲು ಮುಂದಾಗಿದ್ದರು. ನಗರದ ಎಚ್ ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಲೀಲಾ ಪ್ಯಾಲೇಸ್ ನಲ್ಲಿ ಬುಧವಾರ (ನ.29) ಮಧ್ಯಾಹ್ನ ಸಭೆ ನಡೆಸಲು ನಿಗದಿಯಾಗಿತ್ತು.
ತಮಿಳುನಾಡು ತಂಡದಲ್ಲಿ ಜಯಲಲಿತಾ ಮುಖ್ಯ ಕಾರ್ಯದರ್ಶಿ ಸಿಎಸ್ ಸಾರಂಗಿ, ಐಜಿ ಅಮರೀಶ್ ಪುಜಾರ್, ಕಾವೇರಿ ತಾಂತ್ರಿಕ ಸಮಿತಿ ಸದಸ್ಯರು ಸೇರಿದಂತೆ 11 ಜನ ಭಾಗವಹಿಸಿದ್ದರು.
ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಕಾನೂನು ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಮುಂತಾದವರು ಪಾಲ್ಗೊಂಡಿದ್ದರು.
ಜಯಾ ಹೇಳಿಕೆ: ಮೆಟ್ಟೂರು ಡ್ಯಾಂನಲ್ಲಿ 16 ಟಿಎಂಸಿ ನೀರು ಮಾತ್ರ ಇದೆ. ಅದು ಇನ್ನೂ 6 ದಿನಗಳಿಗೆ ಮಾತ್ರ ಸಾಕಾಗುತ್ತದೆ. ಸಾಂಬಾ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಿನ 15 ದಿನಗಳಲ್ಲಿ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯಕ್ಕೆ ಮನವಿ ಸಲ್ಲಿಸಿದೆವು. ಆದರೆ, ಒಂದು ಹನಿ ನೀರು ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಖಡಾಖಂಡಿತವಾಗಿ ಹೇಳಿದೆ.
ನಮ್ಮ ರೈತರು ಈಗಾಗಲೇ ಕುರುವೈ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ನೀರು ಸಿಕ್ಕರೆ ಒಂದು ಬಾರಿಯಾದರೂ ಸಾಂಬಾ ಬೆಳೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. 14 ಲಕ್ಷ ಎಕರೆ ಭೂಮಿಯ ಬೆಳೆ ನಾಶವಾದರೆ, ದೊಡ್ಡ ವಿಪತ್ತು ಎದುರಿಸಬೇಕಾಗಿದೆ.
ಸುಪ್ರೀಂಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾದೆ. ಈಗ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಿತಾ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.
ಶೆಟ್ಟರ್ ಹೇಳಿಕೆ: 20 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬೇಕಾಗಿದೆ. 37 ಟಿಎಂಸಿ ನೀರು ಮಾತ್ರ ಜಲಾಶಯಗಳಲ್ಲಿ ಮಾತ್ರ ಇದೆ. 30 ಟಿಎಂಸಿ ನೀರು ಬಿಡಬೇಕು ಎಂದು ಬೇಡಿಕೆ ಒಡ್ಡಿದರು.
ನಮ್ಮಲ್ಲೇ ನೀರು ಇಲ್ಲದಿರುವಾಗ ಅಷ್ಟು ಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಆದರೆ, 30 ಟಿಎಂಸಿ ಬೇಕೇ ಬೇಕು ಎಂದು ತಮಿಳುನಾಡು ಸಿಎಂ ಜಯಲಲಿತಾ ಪಟ್ಟು ಹಿಡಿದರು ಹೀಗಾಗಿ ಒಂದು ಹನಿ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಬೇಕಾಯಿತು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಬೊಮ್ಮಾಯಿ ಹೇಳಿಕೆ: ಸಾಂಬಾ ಬೆಳೆಗೆ ನಷ್ಟವಾಗುತ್ತೆ ಎಂಬ ವಾದ ಒಪ್ಪಲಾಗದು. ತಮಿಳುನಾಡು ಬೇಡಿಕೆಗೆ ಒಪ್ಪಲಾಗುವುದಿಲ್ಲ. ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಲಾಗಿದೆ. 6.32 ಟಿಎಂಸಿ ನೀರಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.
* ಶಿವನಸಮುದ್ರಂ ಹಾಗೂ ಮೆಟ್ಟೂರು ಡ್ಯಾಂಗಳಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡುವುದು.
* ಕೇಂದ್ರ ನಿರ್ದೇಶನದಂತೆ ಎರಡು ರಾಜ್ಯಗಳ ತಜ್ಞರ ಸಮಿತಿ ರಚಿಸಿ ಮಾತುಕತೆ ನಡೆಸುವುದು
* ತಜ್ಞರ ಸಮಿತಯಲ್ಲಿ ಉಭಯ ರಾಜ್ಯಗಳ ರೈತ ಮುಖಂಡರು ಪಾಲ್ಗೊಳ್ಳುವುದು ಎಂಬ ಸೂತ್ರ ನೀಡಲಾಗಿತ್ತು.
ರಾಜ್ಯ ನೀಡಿದ ಮೂರು ಅಂಶದ ಶಾಶ್ವತ ಪರಿಹಾರ ಸೂತ್ರವನ್ನು ತಮಿಳುನಾಡು ಒಪ್ಪಲಿಲ್ಲ. ಒಂದು ಹನಿ ನೀರು ಬಿಡುವುದಿಲ್ಲ ಎಂಬ ಮಾತು ಬಳಸಿಲ್ಲ. ಜಯಲಲಿತಾ ಅವರು ಏಕೆ ಆ ರೀತಿ ಹೇಳಿದರೋ ಗೊತ್ತಿಲ್ಲ.












Click it and Unblock the Notifications