ಮುಖ್ಯಮಂತ್ರಿ ಕುರ್ಚಿಗೆ ಸಿದ್ದು ಓಕೆ ಅಂದ ಯಡಿಯೂರಪ್ಪ

ಈಗಾಗಲೆ ಕಾಂಗ್ರೆಸ್ಸಿನಲ್ಲಿ ಅನೇಕ ನಾಯಕರು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವುದು ಸುಳ್ಳಲ್ಲ. ಮುಖ್ಯಮಂತ್ರಿ ಪದವಿಯ ಮೇಲೆ ಕಣ್ಣಿಟ್ಟೇ ವಲಸೆ ಬಂದಿರುವ ಸಿದ್ದರಾಮಯ್ಯ ಹಿಂದೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಎಚ್ ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರಪ್ಪ, ಎಚ್.ಕೆ. ಪಾಟೀಲ್, ವೀರಪ್ಪ ಮೊಯ್ಲಿ, ದೆಹಲಿಯಿಂದ ಕರೆಯಿಸಿಕೊಂಡಿರುವ ಎಸ್.ಎಂ.ಕೃಷ್ಣ ಮುಂತಾದವರು ರಾಜ್ಯದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿ ನಿಂತಿದ್ದಾರೆ.
ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ ಒಬ್ಬರು. ಮುಖ್ಯಮಂತ್ರಿ ಪಟ್ಟಕ್ಕೆ ತಾವೂ ಆಕಾಂಕ್ಷಿ ಎಂದು ಅವರು ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಆ ಹುದ್ದೆಗೆ ಅವರು ಅರ್ಹರು ಕೂಡ ಎಂದು ನುಡಿದಿರುವುದು ಅನೇಕರು ಹುಬ್ಬೇರಿಸುವಂತೆ ಮಾಡಿದೆ.
ಚುನಾವಣೆಯ ನಂತರ ಕಾಂಗ್ರೆಸ್ ಬಹುಮತ ಗಳಿಸಿದರೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಅಚ್ಚರಿಯಿಲ್ಲ. ಆಗ ಯಾವ ನಾಯಕರೂ ಇದನ್ನು ವಿರೋಧಿಸಬಾರದು ಎಂದು ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೇ ಆದೇಶ ನೀಡಿದ್ದಾರೆ. ಕಾಂಗ್ರೆಸ್ ವ್ಯವಹಾರದಲ್ಲಿ ತಲೆಹಾಕಲು ಯಡಿಯೂರಪ್ಪನವರಿಗೆ ಏನು ಹಕ್ಕಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಅನೇಕ ಒಳಸುಳಿಗಳು ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತವೆ.
ಡಿಸೆಂಬರ್ 9ರಂದು ಯಡಿಯೂರಪ್ಪನವರು ಕರ್ನಾಟಕ ಜನತಾ ಪಕ್ಷವನ್ನು ಅವರು ಉದ್ದೇಶಪೂರ್ವಕವಾಗಿಯೇ ಸೋನಿಯಾ ಗಾಂಧಿ ಅವರ ಜನುಮ ದಿನದಂದು ಉದ್ಘಾಟಿಸುತ್ತಿರುವುದು, ಯಡಿಯೂರಪ್ಪನವರ ಹುನ್ನಾರ ಏನು ಎಂದು ತಿಳಿದವರಿಗೆ ಅಚ್ಚರಿ ತರುವುದಿಲ್ಲ. ಅಲ್ಲದೆ, ಕೆಲದಿನಗಳ ಹಿಂದೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಯಾದಾಗ ಯಡಿಯೂರಪ್ಪನವರು ಬಿಜೆಪಿ ನಾಯಕರನ್ನು ಕ್ಯಾರೆ ಅಂತ ಕೂಡ ಅನ್ನದೆ ಕಾಂಗ್ರೆಸ್ ಪಾಳಯವನ್ನು ನೇರವಾಗಿ ಹೋಗಿ ಸೇರಿಕೊಂಡಿದ್ದರು.
ಆ ಸಂದರ್ಭದಲ್ಲಿ, ಯಡಿಯೂರಪ್ಪನವರನ್ನು ಬಾಚಿ ತಬ್ಬಿಕೊಂಡಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು, ಯಡಿಯೂರಪ್ಪನವರೆ ತಾವು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡುವುದನ್ನು ನಾನು ನೋಡಲು ಇಚ್ಛೆಪಡುತ್ತೇವೆ ಎಂದು ಘಂಟಾಘೋಷವಾಗಿ ಸಾರಿದ್ದರು. ಅಲ್ಲದೆ, ದೆಹಲಿಗೆ ಹೋದಾಗಲೆಲ್ಲ ಯಡಿಯೂರಪ್ಪನವರು ಸೋನಿಯಾ ಗಾಂಧಿ ಅವರನ್ನು ಗುಟ್ಟಾಗಿ ಭೇಟಿಯಾಗಿರುವುದು ಎಲ್ಲೆಡೆ ಗುಲ್ಲಾಗಿದೆ.
ಮುಂದಿನ ಚುನಾವಣೆಯ ನಂತರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆ ಯಡಿಯೂರಪ್ಪನವರ ಕೆಜೆಪಿ ಪಕ್ಷ ಮೈತ್ರಿ ಮಾಡಿಕೊಂಡರೂ ಆಶ್ಚರ್ಯವಿಲ್ಲ ಎಂದು ಮಾತುಗಳು ವಿಧಾನಸೌಧದ ಕಾರಿಡಾರ್‌ನಲ್ಲಿ ಅಡ್ಡಾಡುತ್ತಿವೆ. ಈ ಎಲ್ಲ ಹಿನ್ನೆಲೆ ಗಮನಿಸಿದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಅಭ್ಯಂತರವೇನೂ ಇಲ್ಲ ಎಂದು ಹೇಳಿದ್ದರಲ್ಲಿ ಅಂತಹ ಅಚ್ಚರಿಯೂ ಕಂಡುಬರುವುದಿಲ್ಲ. ಟೋಪಿವಾಲಾ ಎಂದು ಸಿದ್ದುವನ್ನು ಕೆಣಕಿದ ಈಶ್ವರಪ್ಪ ಅವರಿಗೆ ಟಾಂಗ್ ನೀಡಲು ಈ ಹೇಳಿಕೆ ನೀಡಿದ್ದರೂ ಅಚ್ಚರಿಯಿಲ್ಲ.












Click it and Unblock the Notifications