ಲೀಲಾ ಪ್ಯಾಲೇಸಲ್ಲಿ ಜಯಲಲಿತಾ ಶೆಟ್ಟರ್ ಭೇಟಿ

ಲೀಲಾ ಪ್ಯಾಲೇಸಲ್ಲಿ ಭೇಟಿ : ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಲೀಲಾ ಪ್ಯಾಲೇಸ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಕರ್ನಾಟಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ ಎಂದು ಡಿಸಿಎಂ ಮತ್ತು ಗೃಹಸಚಿವ ಆರ್ ಅಶೋಕ್ ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನ.29, ಗುರುವಾರದಂದು ಬೆಂಗಳೂರಿಗೆ ಬರಲಿದ್ದಾರೆ. ಸುಪ್ರೀಂ ಕೋರ್ಟ್ ಅಣತಿಯಂತೆ ಮಾತುಕತೆಗೆ ಬರಲು ಜಯಲಲಿತಾ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನವದೆಹಲಿಯಲ್ಲಿ ಮಂಗಳವಾರ ತಿಳಿಸಿದರು.
ಹೈದರಾಬಾದ್ ಕರ್ನಾಟಕದ ಪ್ರಾಂತ್ಯಕ್ಕೆ ವಿಶೇಷ ಸ್ಥಾನ ದೊರಕಿಸಿಕೊಡುವ ಉದ್ದೇಶದಿಂದ ಕರ್ನಾಟಕದ ಸಂಸದರೊಡನೆ ಚರ್ಚಿಸಿ, ಸಂವಿಧಾನದ ಕಲಂ 371 (ಜೆ) ತಿದ್ದುಪಡಿ ಮಸೂದೆಯನ್ನು ಈ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸುವಂತೆ ಕೇಂದ್ರವನ್ನು ಒತ್ತಾಯಿಸುವ ಉದ್ದೇಶದಿಂದ ದೆಹಲಿಗೆ ಬಂದಾಗ, ಜಯಲಲಿತಾ ಜೊತೆ ಕಾವೇರಿ ನೀರು ಹಂಚಿಕೆ ಕುರಿತಂತೆ ಚರ್ಚಿಸಲಿರುವ ವಿಷಯ ತಿಳಿಸಿದರು.
ಬೆಂಗಳೂರಿನಲ್ಲಿ ನ.29ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆ ನಡೆಯುತ್ತಿರುವ ಬಗ್ಗೆ ದೃಢೀಕರಿಸಿ ತಮಿಳುನಾಡು ಸರಕಾರ ಹೇಳಿಕೆ ನೀಡಿದೆ. ಜಯಲಲಿತಾ ಬೆಂಗಳೂರಿಗೆ ಗುರುವಾರ ಹೋಗುತ್ತಿರುವುದಾಗಿ ಸರಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳು ಇನ್ನೂ ಬರಗಾಲದ ಹೊಡೆತಕ್ಕೆ ಸಿಲುಕಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ. ಕರ್ನಾಟಕದ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ನಮ್ಮ ಬೆಳೆಗಳಿಗೇ ನೀರು ಸಾಲುತ್ತಿಲ್ಲವಾದ್ದರಿಂದ ರಾಜ್ಯದ ನೀರಿನ ಪರಿಸ್ಥಿತಿಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಮನವರಿಕೆ ಮಾಡಿಕೊಡುವುದಾಗಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳಲು 2013ರ ಫೆಬ್ರವರಿವರೆಗೆ ಕರ್ನಾಟಕದಿಂದ 52.8 ಟಿಎಂಸಿ ನೀರನ್ನು ಬಿಡಬೇಕೆಂದು ಆದೇಶ ನೀಡಬೇಕೆಂದು ಸುಪ್ರೀಂಕೋರ್ಟಿಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯನ್ನು ಆಲಿಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ಕೆ. ಜೈನ್ ಮತ್ತು ನ್ಯಾ. ಮದನ್ ಬಿ. ಲೋಕೂರ್ ಅವರು, ರೈತರ ಹಿತದೃಷ್ಟಿಯಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ.












Click it and Unblock the Notifications