ಕರ್ನಾಟಕದ ಮೇಲೆ ಉಗ್ರರ ಕರಿ ನೆರಳು, ಹೈ ಅಲರ್ಟ್

ಉಗ್ರರ ಟಾರ್ಗೆಟ್ ಇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಗುಪ್ತಚರ ಇಲಾಖೆ ಹೇಳಿದೆ.
ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನನ್ನು ಗಲ್ಲಿಗೆ ಹಾಕಿರುವ ಬಗ್ಗೆ ತಾಲಿಬಾನಿಗಳು ಕೆರಳಿ ಕೆಂಡವಾಗಿದ್ದಾರೆ. ಅಜ್ಮಲ್ ಕಸಬ್ ಸಾವಿಗೆ ಪ್ರತೀಕಾರವಾಗಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ತಾಲಿಬಾನ್ ಉಗ್ರರು ಭಾರತಕ್ಕೆ ಬೆದರಿ ಹಾಕಿದ್ದರು.
ಲಭ್ಯ ಮಾಹಿತಿ ಪ್ರಕಾರ ಎಎಚ್ ಭಟ್ ಎಂಬ ಉದ್ಯಮಿಯೊಬ್ಬರಿಗೆ ಲಷ್ಕರ್ ಇ ತೋಯ್ಬಾ ಉಗ್ರರಿಂದ ಭಾರತದ ಆಯ್ದ ಸ್ಥಳಗಳ ಮೇಲೆ ದಾಳಿ ನಡೆಸುವ ಬಗ್ಗೆ ಇಮೇಲ್ ಬಂದಿದೆ.
ಈ ಪಟ್ಟಿಯಲ್ಲಿ ಮೊಟ್ಟ ಮೊದಲ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ಸ್ಥಳಗಳಿದೆ. ವೈಷ್ಣೋದೇವಿ ಮಂದಿರ ಕೂಡಾ ಟಾರ್ಗೆಟ್ ಪಟ್ಟಿಯಲ್ಲಿದೆ. ಕಸಬ್ ನನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತೆ ಎಂಬ ಇಮೇಲ್ ಬಂದ ಮೇಲೆ ಗುಪ್ತಚರ ಇಲಾಖೆ ಹೈ ಅಲರ್ಟ್ ಘೋಷಿಸಲು ಸರ್ಕಾರಕ್ಕೆ ಸೂಚಿಸಿದೆ.
ಇಮೇಲ್ ಬಂದಿದ್ದ ಕಂಪ್ಯೂಟರ್ ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳು, ಇಮೇಲ್ ನ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಹುಸಿ ಬೆದರಿಕೆ ಇಮೇಲ್ ಎನ್ನಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಈಗಲೇ ಏನನ್ನು ಹೇಳಲಾಗದು ಎಂದಿದ್ದಾರೆ.
ಬೆಂಗಳೂರಿನಿಂದ ಜಮ್ಮು ಪೊಲೀಸರಿಗೆ ಬೆದರಿಕೆ ಇಮೇಲ್ : ಇದರ ಜೊತೆಗೆ, ಬೆಂಗಳೂರಿನ ಸೈಬರ್ ಸೆಂಟರ್ ನಿಂದ ಜಮ್ಮು ಕಾಶ್ಮೀರ ಪೊಲೀಸರಿಗೆ ಬೆದರಿಕೆ ಇಮೇಲ್ ಕಳಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮಂಗಳವಾರ (ನ.27) ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉಡುಪಿಯಲ್ಲಿ ಅಶೋಕ್ ಹೇಳಿಕೆ: ಉಡುಪಿಯಲ್ಲಿ ಬಸ್ ಡಿಪೋ ಉದ್ಘಾಟನೆಗೆ ಬಂದಿದ್ದ ಕರ್ನಾಟಕದ ಗೃಹ ಸಚಿವ ಆರ್ ಅಶೋಕ್ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಗುಪ್ತಚರ ಇಲಾಖೆ ಜೊತೆ ಕರ್ನಾಟಕ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ ಎಂದರು.
ಕಸಬ್ ನೇಣಿಗೇರಿಸಿದ ಮೇಲೆ ಉಗ್ರರ ದಾಳಿ ಬಗ್ಗೆ ಭೀತಿ ಉಂಟಾಗಿದೆ. ಆದರೆ, ಜನತೆ ಯಾವುದೇ ರೀತಿ ಭಯ ಆತಂಕಕ್ಕೆ ಒಳಗಾಗಬೇಕಿಲ್ಲ. ಸುಮಾರು 3,000ಕ್ಕೂ ಅಧಿಕ ಜನರ ಹೆಚ್ಚುವರಿ ಪೊಲೀಸ್ ಪಡೆಯನ್ನು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಇತ್ತೀಚೆಗೆ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆ ಹಿಡಿಯಲಾದ ಉಗ್ರರ ವಿಚಾರಣೆ ಜಾರಿಯಲ್ಲಿದೆ ಎಂದು ಅಶೋಕ್ ಹೇಳಿದರು.











Click it and Unblock the Notifications