ಬೆಂಗಳೂರಿನಲ್ಲಿ ಪತ್ರಕರ್ತನ ನಿಗೂಢ ಆತ್ಮಹತ್ಯೆ!

'ಹೊಂಬಿಸಿಲು' ಎಂಬ ಪಾಕ್ಷಿಕದ ಸಂಪಾದಕರಾಗಿದ್ದ 50 ವರ್ಷದ ಎಚ್.ಎಸ್. ರಾಜಶೇಖರ್ ಎಂಬುವವರು ದಾರುಣ ಸಾವಿಗೀಡಾದ ದುರ್ದೈವಿ. ಸಾಫ್ಟ್‌ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ 'ಗೆಳತಿ'ಯೇ ರಾಜಶೇಖರ್ ಅವರ ಸಾವಿಗೆ ಕಾರಣಳಾದಳಾ? ತನಿಖೆಯಿಂದ ತಿಳಿದುಬರಬೇಕಾಗಿದೆ.
ವಿಚಿತ್ರವೆಂದರೆ, ರಾಜಶೇಖರ್ ಅವರು ಸಾವಿಗೆ ಶರಣಾಗುವ ಮೊದಲು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಸಚಿವ ಮತ್ತು ಡಿಸಿಎಂ ಆರ್ ಅಶೋಕ್, ಮಹಾರಾಷ್ಟ್ರದ ರಾಜ್ಯಪಾಲರು ಮತ್ತು ಎಲ್ಲ ಪತ್ರಿಕೆಗಳಿಗೆ, ಟಿವಿ ವಾಹಿನಿಗಳಿಗೆ ಮರಣಪತ್ರದ ಪ್ರತಿ ಕಳಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಬಸವೇಶ್ವರ ನಗರದ ನಿವಾಸಿಯಾಗಿದ್ದರೂ ರಾಜಶೇಖರ್ ಅವರು ಮರಣಪತ್ರ ಬರೆಯಲು ಆಯ್ದುಕೊಂಡ ಜಾಗ ಮೆಜೆಸ್ಟಿಕ್‌ನಲ್ಲಿರುವ ಗಣೇಶ್ ಲಾಡ್ಜ್‌ನ 302ನೇ ರೂಂ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಗಣೇಶ್ ಲಾಡ್ಜಿಗೆ ಹೋದಾಗ ಈ ರೂಂನಲ್ಲಿ ಕೂಡ ಅವರು ಬರೆದಿಟ್ಟ ಮರಣಪತ್ರದ ಪ್ರತಿಯೊಂದು ದೊರೆತಿದೆ.
ಮರಣ ಪತ್ರದ ಮೇಲೆ ಅವರು ಯಾವುದೇ ಸಹಿ ಹಾಕಿಲ್ಲ. ಆ 'ಗೆಳತಿ'ಯ ಹೆಸರೂ ನಮೂದಿಸಿಲ್ಲ. ಕರ್ನಾಟಕದ ಪತ್ರಿಕೆಗಳಿಗೆ, ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ ಮಹಾರಾಷ್ಟ್ರದ ರಾಜ್ಯಪಾಲರಿಗೂ ಮರಣಪತ್ರದ ಪ್ರತಿ ಕಳಿಸಿದ್ದು ಯಾಕೆ? ಎಂಬುದು ಇನ್ನೂ ನಿಗೂಢವಾಗಿದೆ. ಆ ಗೆಳತಿಗೂ ಇವರಿಗೂ ಏನು ಸಂಬಂಧವಿತ್ತು? ಆಕೆ ಯಾಕೆ ಹಣ ನೀಡಬೇಕೆಂದು ಬ್ಲಾಕ್‌ಮೇಲ್ ಮಾಡುತ್ತಿದ್ದಳು? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಆದರೆ, ತಿಳಿದುಬಂದಿರುವ ಸಂಗತಿಯೆಂದರೆ, ಅವರು ಬಸವೇಶ್ವರ ನಗರಕ್ಕೆ ಮನೆ ಸ್ಥಳಾಂತರಿಸಿದ ನಂತರ ಅವರ ಬದುಕಿನ ದಿಕ್ಕೇ ಬದಲಾಗಿದೆ. ಹತ್ತಿರದಲ್ಲಿ ವಾಸವಿದ್ದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಂದಿಗೆ ಗೆಳೆತನ ಆರಂಭವಾಗಿದೆ. ಆದರೆ, ಆಕೆ ಎಸ್ಎಂಎಸ್ ಕಳಿಸಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ. ಇದರಿಂದ ಬೇಸತ್ತ ರಾಜಶೇಖರ್ ಅವರು ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದಾರೆ.
ರಾಜಶೇಖರ್ ಅವರು ಪ್ರೇಮಾ ಎಂಬುವರೊಂದಿಗೆ ಮದುವೆಯಾಗಿದ್ದರು, ಅವರಿಗೆ ಮಕ್ಕಳೂ ಇವೆ. ರಾಜಶೇಖರ್ ಅವರಿಗೆ 'ನಿಗೂಢ' ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರಲಿಲ್ಲ. ಈ ಸಾವಿನ ಹಿಂದೆ ಬೇರೆ ಯಾರದೋ ಕೈವಾಡವಿದೆ ಎಂದು ಅವರ ಹೆಂಡತಿ ಪ್ರೇಮಾ ದೂರಿದ್ದಾರೆ. ಮತ್ತೊಂದು ವಿವರಣೆಯ ಪ್ರಕಾರ, ರಾಜಶೇಖರ್ ಅವರ ಅಸಭ್ಯ ನಡೆಯಿಂದಾಗಿ ಮನೆ ಮಾಲಿಕರು ಅವರನ್ನು ಮನೆಯಿಂದ ಹೊರದಬ್ಬಬೇಕೆಂದು ನಿರ್ಧರಿಸಿದ್ದರು. ಈ ಎಲ್ಲ ಗೊಂದಲಗಳಿಗೆ ತನಿಖೆಯಿಂದ ಉತ್ತರ ಕಂಡುಕೊಳ್ಳಬೇಕಿದೆ.












Click it and Unblock the Notifications