371ಕ್ಕೆ ತಕರಾರಿಲ್ಲ : ಚಿಗುರಿತು ಕಮರಿದ ಕನಸು

ಈ ನಿರ್ಧಾರದ ಬೆನ್ನ ಹಿಂದೆಯೇ, ವಿಧೇಯಕ ಮಂಡನೆಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಗೊಂದಲಕ್ಕೆ ಕೊನೆಹಾಡಿ, ವಿಧೇಯಕವನ್ನು ಈ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಬೇಕೆಂದು ಒತ್ತಾಯಿಸಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲು ರಾಜ್ಯ ಬಿಜೆಪಿ ಸಂಸದರ ನಿಯೋಗ ಸೋಮವಾರ ಭೇಟಿ ಮಾಡಲಿದೆ.
ಈ ಹಿನ್ನೆಲೆಯಲ್ಲಿ, ಅಭಿವೃದ್ಧಿಯ ಕನಸು ಕಾಣುತ್ತಿರುವ ಉತ್ತರ ಕರ್ನಾಟಕದ ಜನತೆಗೆ ಕಮರಿಹೋಗಿದ್ದ ಕನಸು ಮತ್ತೆ ಚಿಗುರೊಡೆದಂತಾಗಿದೆ. ಈ ಚಳಿಗಾಲದ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕ ಮಂಡಿಸಿ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ದೊರಕಿಸಿ ಕೊಡದಿದ್ದರೆ ನ.28ರಂದು ಬಂದ್ ಆಚರಿಸುವುದಾಗಿ ಹೈದರಾಬಾದ್ ಕರ್ನಾಟಕ ವಿಮೋಚನಾ ಸಮಿತಿ ಬೆದರಿಕೆ ಒಡ್ಡಿತ್ತು.
ವಿಧೇಯಕ ಮಂಡನೆಗೆ ರಾಜ್ಯ ಸರಕಾರ ತಕರಾರು ತೆಗೆದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಕೇಂದ್ರ ಸಂಸದೀಯ ಸಮಿತಿ ಅಧ್ಯಕ್ಷರಾಗಿರುವ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದು, ವಿಧೇಯಕ ಮಂಡಿಸಬೇಕು ಮತ್ತು ತೆಲಂಗಾಣ ಮಾದರಿಯಲ್ಲಿಯೇ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ತಿದ್ದುಪಡಿ ವಿಧೇಯಕಕ್ಕೆ ತಕರಾರಿಲ್ಲ ಎಂದು ಸ್ಪಷ್ಟಪಡಿಸಿ ಕೂಡಲೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸಿಎಂ ಅವರನ್ನು ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ, ಈ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗದಿದ್ದರೆ ಕೆಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಬೆದರಿಕೆ ಒಡ್ಡಿದ್ದರು.
ತೆಲಂಗಾಣ ಮಾದರಿಯಲ್ಲಿ ಸ್ಥಾನ ದೊರೆತರೆ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಸ್ಥಳೀಯ ಜನತೆಗೆ ಉದ್ಯೋಗಗಳು ದೊರೆಯಲಿವೆ ಮತ್ತು ಶಿಕ್ಷಣದಲ್ಲಿ ಮೀಸಲು ಸಿಗಲಿದೆ. ವಿದರ್ಭ ಮಾದರಿಯಲ್ಲಿ ಸ್ಥಾನ ದೊರೆತರೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ.
ಆದರೆ, ಇವೆರಡು ಮಾದರಿಗಿಂದ ಹೈದರಾಬಾದ್ ಕರ್ನಾಟಕ ಮಾದರಿಯನ್ನೇ ಅನುಷ್ಠಾನಗೊಳಿಸಿದರೆ ಹೆಚ್ಚು ಉಪಯುಕ್ತ ಎಂದು ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಸದ್ಯಕ್ಕೆ ಚೆಂಡು ಕೇಂದ್ರದ ಅಂಗಳದಲ್ಲಿದ್ದು, ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಎಲ್ಲ ರಾಜಕಾರಣಿಗಳು ಒಗ್ಗಟ್ಟಾಗಿ ಒತ್ತಾಯಿಸಿದರೆ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ರಹದಾರಿ ದೊರೆಯಲಿದೆ.












Click it and Unblock the Notifications