ವಿರಾಜಪೇಟೆ ಕಾಂಗ್ರೆಸ್ ಅಧ್ಯಕ್ಷ ಕೊಲೆ ರಹಸ್ಯ ಬಯಲು

ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ನಿವಾಸಿಯಾಗಿದ್ದ ಅಬ್ದುಲ್ ಲತೀಫ್(36) ಅವಿವಾಹಿತನಾಗಿದ್ದು, ತಾಯಿ, ಸಹೋದರನೊಂದಿಗೆ ವಾಸವಾಗಿದ್ದನು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಬಾರಿಗೆ ಸದಸ್ಯನಾಗಿಯೂ ಆಯ್ಕೆಯಾಗಿದ್ದನು. ರವಿಯನ್ನು ಹಂತಕರು 2005ರಲ್ಲಿ ಗುಂಡಿಕ್ಕಿ ಕೊಂದ ಬಳಿಕ ರಾಜಕೀಯದಲ್ಲಿ ಹೆಚ್ಚಾಗಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ವೀರಾಜಪೇಟೆಯಲ್ಲಿ ಕಾಂಗ್ರೆಸ್‌ನ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದನು.
ರಾಜಕೀಯದೊಂದಿಗೆ ಬೇರೆ, ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದ ಈತನ ಮೇಲೆ ಕೆಲವೊಂದು ಆರೋಪಗಳಿದ್ದವಾದರೂ ಅದೆಲ್ಲವನ್ನೂ ಎದುರಿಸಿಕೊಂಡೇ ಈತ ಬೆಳೆಯುತ್ತಿದ್ದ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ... ಮೇಲ್ನೋಟಕ್ಕೆ ಇವನೊಂದಿಗೆ ಎಲ್ಲರೂ ಸ್ನೇಹಿತರಂತೆ ಇದ್ದರಾದರೂ ಒಳಗೊಳಗೆ ಮುಗಿಸಲು ಸಂಚು ರೂಪಿಸುತ್ತಿದ್ದಾರೆ ಅನ್ನೋದು ಲತೀಫ್ ಗೊತ್ತಿರಲಿಲ್ಲ. ಹಾಗಾಗಿಯೇ ಆತ ಕರೆದ ತಕ್ಷಣವೇ ಹಿಂದು ಮುಂದು ನೋಡದೆ ಹಂತಕರ ಜೊತೆ ಹೊರಟು ಹೋಗಿದ್ದನು.
ಅಪಾರವಾಗಿ ಲಾಭ ತಂದುಕೊಡುತ್ತಿದ್ದ ಗಾಂಜಾ ಬೆಳೆ ಬೆಳೆದು ವ್ಯಾಪಾರ ಮಾಡುವ ಉದ್ದೇಶ ಲತೀಫ್ ಸ್ನೇತರಿಗಿತ್ತು. ಆದರೆ, ಮೊದಲು ಒಪ್ಪಿ ನಂತರ ಗಾಂಜಾ ಬೆಳೆ ಬೆಳೆಗೆ ಹಣ ಹೂಡಲು ಲತೀಫ್ ಒಪ್ಪದಿದ್ದರಿಂದ ಆತನನ್ನು ಮುಗಿಸಿಹಾಕಲು ಸ್ನೇಹಿತರ ಪಡೆ ಸಂಚು ಹೂಡಿದೆ. ಈ ಸಂಚನ್ನು ಕಾರ್ಯಗತ ಮಾಡುವ ಉದ್ದೇಶದಿಂದ ಬೇಟೆ ಆಡುವ ನೆಪವೊಡ್ಡಿ ಲತೀಫ್‌ನನ್ನು ಕರೊದೊಯ್ದಿದ್ದಾರೆ. ಲತೀಫ್‌ಗೆ ಈ ಸಂಚಿನ ಸುಳಿವೂ ಸಿಕ್ಕಿಲ್ಲ. ಸಮಯ ನೋಡಿಕೊಂಡು ಪೂಣಚ್ಚ ಗುಂಡು ಹಾರಿಸಿ ಲತೀಫ್‌ನನ್ನು ಹತ್ಯೆಗೈದಿದ್ದ. ಈ ಕೊಲೆಗೆ ಸಾಕ್ಷಿಯಾಗಿದ್ದ ಸ್ಟ್ಯಾನ್ಲಿಯನ್ನು ಬೆದರಿಸಿ ಅವರು ಅಲ್ಲಿಂದ ಪರಾರಿಯಾಗಿದ್ದರು.
ಇದರಿಂದ ಹೆದರಿದ್ದ ಸ್ಟ್ಯಾನ್ಲಿ, ನವೆಂಬರ್ 17ರಂದು ಬೆಳಗ್ಗಿನ ಜಾವ ಘಟನೆ ನಡೆದ ಸ್ಥಳದಿಂದ ಬಂದು ಬೇಟೋಳಿಯ ಲತೀಫ್ ಮನೆಯವರಿಗೆ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕ ಗುಂಡೇಟಿನಿಂದ ಲತೀಫ್ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದ್ದಾನೆ. ಆ ದಿನ ಆತ ಪೊಲೀಸರಿಗೆ ಕಥೆ ಕಟ್ಟಿ ಹೇಳಿದ ಹೇಳಿಕೆಯೂ ಸಂಶಯ ಬರುವಂತಿತ್ತು. ಆನೆ ಬೆನ್ನತ್ತಿದ್ದರಿಂದ ತಪ್ಪಿಸಿಕೊಳ್ಳುವಾಗ ಆಕಸ್ಮಿಕವಾಗಿ ಗುಂಡು ಹಾರಿ ಲತೀಫ್ ಸತ್ತಿದ್ದ ಎಂದು ಆತ ಹೇಳಿದ್ದು ಸಂಶಯಕ್ಕೆ ಗುರಿಮಾಡಿತ್ತು.
ಮೈಸೂರಿನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೋಹನ್ ರೆಡ್ಡಿಯವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ನಿರೀಕ್ಷಕ ಶಿವಶಂಕರಪ್ಪ ನೇತೃತ್ವದಲ್ಲಿ ಹಂತಕರಾದ ಪೂಣಚ್ಚ, ಪ್ರೀತಂ, ಹರೀಶ್ ಹಾಗೂ ರಾಬಿನ್‌ನ ಪತ್ತೆಗಾಗಿ ಬಲೆ ಬೀಸಲಾಗಿತ್ತು. ಹಂತಕರು ಪೊಲೀಸ್ ವಶಕ್ಕೆ ಸಿಕ್ಕಿದ ಬಳಿಕ ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ಮಂಜುನಾಥ್ ಅಣ್ಣಿಗೇರಿ ಹಾಗೂ ಮೈಸೂರು ಎಎಸ್ಪಿ ಮೋಹನ್‌ರೆಡ್ಡಿಯವರು ಲತೀಫ್ ಹತ್ಯೆ ಗಾಂಜಾ ಕೃಷಿಗೆ ಹಣ ನೀಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹತ್ಯೆಯಲ್ಲಿ ರಾಜಕೀಯ, ಮತೀಯ ವೈಷಮ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications