ಈಶ್ವರಪ್ಪ ಮಹಾ ದುರಹಂಕಾರಿ : ಯಡಿಯೂರಪ್ಪ

ಡಿಸೆಂಬರ್ 9ರಂದು ಸ್ಥಾಪಿಸಲಿರುವ ಕರ್ನಾಟಕ ಜನತಾ ಪಕ್ಷಕ್ಕಾಗಿ ಕಾರ್ಯಕರ್ತರನ್ನು ಒಟ್ಟುಗೂಡಿಸಲು, ಹೊಸ ಪ್ರಾಡೋ ಕಾರಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪನವರು ಬಾಗಲಕೋಟೆಯಲ್ಲಿ ಭಾನುವಾರ ಈಶ್ವರಪ್ಪ ಅವರನ್ನು ವಾಚಾಮಗೋಚರವಾಗಿ ತೆಗಳಿದ್ದಾರೆ. ಈ ಈಶ್ವರಪ್ಪ ತಮಗಿಂತ ಇನ್ನೊಬ್ಬ ನಾಯಕನೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಯಾರಾದರೂ ಸೇರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈಶ್ವರಪ್ಪ ಅವರು ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಕ್ಕೆ ಪ್ರತಿಯಾಗಿ, ಅಂಥ ಕ್ರಮ ತೆಗೆದುಕೊಂಡು ಮುಂದೆ ಹೆಚ್ಚುಕಮ್ಮಿಯಾದರೆ ಅದಕ್ಕೆ ನಾನು ಜವಾಬ್ದಾರನಲ್ಲ. ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ತೊಡೆ ತಟ್ಟಿದ್ದಾರೆ.
ನಾನೇ ನಾನಾಗಿ ಬಿಜೆಪಿ ಪಕ್ಷವನ್ನು ಉರುಳಿಸಲು ಹೋಗುವುದಿಲ್ಲ. ಜಗದೀಶ್ ಶೆಟ್ಟರ್ ಅವರ ಸರಕಾರ ಪೂರ್ಣಾವಧಿ ಪೂರೈಸಬೇಕೆಂಬುದೇ ನನ್ನ ಆಶಯ. ಆದರೆ, ಇದನ್ನು ನನ್ನ ವೀಕ್ನೆಸ್ ಎಂದು ಯಾರೂ ತಿಳಿಯಬೇಕಾಗಿಲ್ಲ. ನನ್ನ ಈ ಸದುದ್ದೇಶವನ್ನು ದುರ್ಬಳಕೆ ಮಾಡಿಕೊಂಡರೆ, ಮುಂದೆ ನಡೆಯುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಬಾಂಧವ್ಯ, ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟದಲ್ಲಿದ್ದಾಗಲೇ ಹಳಸಿಹೋಗಿತ್ತು. ಯಡಿಯೂರಪ್ಪ ಅವರ ಹೆಸರು ಅಕ್ರಮ ಗಣಿಗಾರಿಕೆ ವರದಿಯಲ್ಲಿ ಕೇಳಿಬಂದಾಗ, ಯಾರೇ ತಪ್ಪು ಮಾಡಲಿ ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿಯ ವಿರುದ್ಧ ಹೇಳಿಕೆ ನೀಡಿದ್ದರು. ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಪಟ್ಟ ತ್ಯಜಿಸಿದಾಗ ಅದರ ಹಿಂದೆ ಈಶ್ವರಪ್ಪ ಹುನ್ನಾರವಿದೆ ಎಂದು ಯಡಿಯೂರಪ್ಪನವರೂ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇವರನ್ನು ದುರಹಂಕಾರಿ ಅನ್ನುವುದು ಇವರು ಅವರನ್ನು ದುರಹಂಕಾರಿ ಅನ್ನುವುದನ್ನು ಸಾಕಷ್ಟು ಬಾರಿ ಕೇಳಿಯಾಗಿದೆ. ಈಗ ಇವರಿಬ್ಬರಲ್ಲಿ ಯಾರು ಹೆಚ್ಚು ದುರಹಂಕಾರಿ ಎನ್ನುವುದು ಸದ್ಯಕ್ಕೆ ಮೂಡಿರುವ ಪ್ರಶ್ನೆ. ಯಾರು?












Click it and Unblock the Notifications