ಕರ್ನಾಟಕದಲ್ಲಿ ಚುನಾವಣೆ ಗಾಳಿ: ಗಾಲಿ ರೆಡ್ಡಿ ಕಣಕ್ಕೆ?

ಅನೇಕ ತಿಂಗಳುಗಳಿಂದ ಜೈಲು ಗರ್ಭದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಸ್ಥಾಪಿಸಿರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂದು ಬಳ್ಳಾರಿಯ ಜನತೆ ಕೇಳುತ್ತಿರುವಾಗಲೇ ಅತ್ತ ಹೈದರಾಬಾದಿನಲ್ಲಿ ಜನಾರ್ದನ ರೆಡ್ಡಿ ಪರ ವಕೀಲರು ನಮ್ಮ ರೆಡ್ಡಿಗೆ ಇನ್ನಾದರೂ ಜಾಮೀನು ಕೊಡಿ ಎಂದು ಕೋರ್ಟಿನಲ್ಲಿ ಅಲವತ್ತುಕೊಂಡಿದ್ದಾರೆ.
'ನನ್ನ ಕಕ್ಷಿದಾರರು ಮಾಜಿ ಸಚಿವರು. ರಾಜಕೀಯವಾಗಿ ಚಲಾವಣೆಯಲ್ಲಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ ಆರಂಭವಾಗಿದೆ. ಜನಾರ್ದನ ರೆಡ್ಡಿ ಅವರೂ ಚುನಾವಣೆಗೆ ಸ್ಪರ್ಧಿಸಬಹುದು. ಹಾಗಾಗಿ ಅವರಿಗೆ ಜಾಮೀನು ನೀಡಿ' ಎಂದು ರೆಡ್ಡಿ ವಕೀಲರು ಹೈದರಾಬಾದಿನಲ್ಲಿರುವ ಸಿಬಿಐ ಕೋರ್ಟಿಗೆ ಮೊರೆಹೋಗಿದ್ದಾರೆ.
'ನನ್ನ ಕಕ್ಷಿದಾರ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ. ರೆಡ್ಡಿಗೆ ಜಾಮೀನು ನೀಡುವುದು ಬೇಡ. ರೆಡ್ಡಿ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಎಂಬ ಸಿಬಿಐ ವಾದದಲ್ಲಿ ಅರ್ಥವಿಲ್ಲ. ಹಾಗಾಗಿ ರೆಡ್ಡಿ ಅವರಿಗೆ ಜಾಮೀನು ನೀಡಿ' ಎಂದು ರೆಡ್ಡಿ ವಕೀಲರು ಗುರುವಾರ ಸಿಬಿಐ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ವಕೀಲರು 'ರೆಡ್ಡಿಗೆ ಜಾಮೀನು ನೀಡಿದರೆ ಸಾಕ್ಷಿದಾರರಿಗೆ ಬೆದರಿಕೆಯೊಡ್ಡಿ, ಸಾಕ್ಷ್ಯ ನಾಶಪಡಿಸುತ್ತಾರೆ. ಆದ್ದರಿಂದ ಅವರಿಗೆ ಜಾಮೀನು ನೀಡಬೇಡಿ' ಎಂದು ಪ್ರತಿವಾದ ಮಂಡಿಸಿದರು. ಇದಕ್ಕೆ ಉತ್ತರಿಸಿದ ರೆಡ್ಡಿ ವಕೀಲರು 'ಸಾಕ್ಷ್ಯಗಳೆಲ್ಲ ಈಗಾಗಲೇ ಅಧಿಕೃತವಾಗಿ, ವೈಜ್ಞಾನಿಕವಾಗಿ ದಾಖಲಾಗಿದೆ. ಅಂತಹುದರಲ್ಲಿ ಅದನ್ನೆಲ್ಲ ಹಾಳು ಮಾಡುತ್ತಾರೆ ಎಂಬ ಸಿಬಿಐ ವಾದದಲ್ಲಿ ಹುರುಳಿಲ್ಲ' ಎಂದು ಕೋರ್ಟ್ ಗಮನ ಸೆಳೆದರು.
ಸಿಬಿಐ ಪ್ರತಿವಾದವನ್ನು ಆಧರಿಸಿ ಜಾಮೀನು ಬಗ್ಗೆ ಆದೇಶ ನೀಡುವುದಾಗಿ ತಿಳಿಸಿದ ಸಿಬಿಐ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.












Click it and Unblock the Notifications