ಬೆಂಗಳೂರು ವಿವಿ ಮೈಲಾರಪ್ಪ ನೇಮಕ ರದ್ದು

ನೇಮಕ ಮಾಡುವಾಗ ನಿಯಮ ಪಾಲಿಸಿಲ್ಲ ಎಂದು ನ್ಯಾ. ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹೈ ಕೋರ್ಟ್ ಹೊರಡಿಸಿದ ನೇಮಕ ರದ್ದು ಆದೇಶವನ್ನು ಎರಡು ತಿಂಗಳ ಕಾಲ ತಡೆ ಹಿಡಿಯುವಂತೆ ಮೈಲಾರಪ್ಪ ಪರ ವಕೀಲ ಮನವಿ ಮಾಡಿಕೊಂಡರು.
ಆದರೆ, ಎರಡು ತಿಂಗಳು ತಡೆ ನೀಡಲು ಸಾಧ್ಯವಿಲ್ಲ. ಮೈಲಾರಪ್ಪ ಅವರು ಇಂದೇ (ನ.21, 2012) ಹುದ್ದೆ ತ್ಯಜಿಸಬೇಕು ಎಂದು ನ್ಯಾ.ಕುಮಾರ್ ಅವರು ಆದೇಶ ಹೊರಡಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಮೈಲಾರಪ್ಪ ಅವರನ್ನು ನೂತನ ಕುಲಸಚಿವರಾಗಿ ನ.2, 2011ರಂದು ಕರ್ನಾಟಕ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಮೂಲಕ ಕುಲಸಚಿವರಾಗಿ ನೇಮಕಗೊಂಡ ಮೊದಲ ದಲಿತ ಪ್ರೊಫೆಸರ್ ಎಂಬ ಕೀರ್ತಿಗೆ ಮೈಲಾರಪ್ಪ ಪಾತ್ರರಾಗಿದ್ದರು. ಅಲ್ಲದೆ 46 ವರ್ಷಕ್ಕೆ ವಿವಿ ರಿಜಿಸ್ಟ್ರಾರ್ ಆಗಿ ನೇಮಕಗೊಂಡು ಹೊಸ ಸಾಧನೆ ಮಾಡಿದ್ದರು.
ನಕಲು ಆರೋಪ: ಪ್ರೊ ಮೈಲಾರಪ್ಪ ಮಂಡಿಸಿದ್ದ ಪ್ರಬಂಧವೇ ನಕಲು. ಮೈಲಾರಪ್ಪ ಅವರ ಶಿಷ್ಯ ವೆಂಕಟರಮಣಪ್ಪ ಅವರು ನಂತರ ಅದೇ ಪ್ರಬಂಧವನ್ನು ಮಂಡಿಸಿದ್ದಾರೆ. ಮೈಲಾರಪ್ಪ ಅವರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ವಿವಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ವಾಸುದೇವ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮೈಲಾರಪ್ಪ ಪ್ರತಿಕ್ರಿಯೆ: ವಿವಿ ರಿಜಿಸ್ಟ್ರಾರ್ ಆಗಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದೇನೆ. ಸರ್ಕಾರ ನೀಡಿದ ಹುದ್ದೆಯನ್ನು ಗೌರವದಿಂದ ಸ್ವೀಕರಿಸಿದ್ದೆ. ಈಗ ಹೈಕೋರ್ಟ್ ನೀಡಿರುವ ಆದೇಶವನ್ನು ಅದೇ ರೀತಿ ಪಾಲಿಸುತ್ತೇನೆ.
ನಾನು ಪ್ರೊಫೆಸರ್ ಆಗಿ 10 ವರ್ಷಗಳ ಕಾಲ ಸಂತೋಷದಿಂದ ಪಾಠ ಮಾಡಿದ್ದೇನೆ, ನನಗೆ ಅದೇ ಇಷ್ಟ. ಆದರೆ, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತೇನೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನಗೆ ಅನ್ಯಾಯವಾಗುವುದಿಲ್ಲ ಎಂದು ಮೈಲಾರಪ್ಪ ಅವರು ಹೇಳಿದರು.
ಡಾ.ಬಿ.ಸಿ.ಮೈಲಾರಪ್ಪ ಅಲಿಯಾಸ್ ಚಿಕ್ಕಮೇಲೂರಪ್ಪ ಅವರನ್ನು ನೂತನ ಕುಲಸಚಿವರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅನುಮತಿ ನೀಡಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಮಾಜಿ ಶಾಸಕರೊಬ್ಬರ ನೆರವಿನಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಕುಲಸಚಿವ ಸ್ಥಾನಕ್ಕೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.












Click it and Unblock the Notifications