ಕಾರ್ಪ್ ಬ್ಯಾಂಕಿನಲ್ಲಿ ಭೀಕರ ಕೊಲೆ, 10 ಲಕ್ಷ ದರೋಡೆ

ಸೋಮವಾರ ಮಧ್ಯಾಹ್ನ ಸುಮಾರು 3 ರಿಂದ 4 ಗಂಟೆ ವೇಳೆಗೆ ಸೋಲದೇವನಹಳ್ಳಿ ಬ್ರಾಂಚ್ ನ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ನಡೆದ ದರೋಡೆಯಲ್ಲಿ ಗ್ರಾಹಕ ಮುರಳೀಧರ್ ಎಂಬುವರ ಬಲ ತೋಳಿಗೆ ತೀವ್ರ ಗಾಯವಾಗಿತ್ತು.
ಗ್ರಾಹಕರೊಬ್ಬರ ಮೇಲೆ ಗುಂಡು ಹಾರಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ 10 ಲಕ್ಷ ರು ದೋಚಿದ್ದ ದುಷ್ಕರ್ಮಿ ಪರಾರಿಯಾಗಿದ್ದ.
ಗಾಯಗೊಂಡಿದ್ದ ಮುರಳಿಧರ್ ಅವರನ್ನು ಸಮೀಪದ ಎನ್ ಅರ್ ಅರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುರಳಿಧರ್ ಮೃತಪಟ್ಟಿದ್ದಾರೆ ಎಂದು ಸೋಲದೇವನಹಳ್ಳಿ ಪೊಲೀಸರು ಹೇಳಿದ್ದಾರೆ.
ಸೋಲದೇವನಹಳ್ಳಿಯಲ್ಲಿರುವ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಆಅಗಿರುವ ಮುರಳಿಧರ್ ಅವರು ದುಡ್ಡು ಕಟ್ಟಲು ಬ್ಯಾಂಕಿಗೆ ಬಂದಿದ್ದರು. ಕ್ಯಾಶ್ ಕೌಂಟರ್ ನ ಬಳಿ ಇದ್ದ ಮುರಳಿಧರ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ದರೋಡೆ ಮಾಡಿ, ಪರಾರಿಯಾಗಿದ್ದಾನೆ.
ಸೋಮವಾರ (ನ.19) ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಬಂದ ದುಷ್ಕರ್ಮಿ ವಿದ್ಯಾರ್ಥಿಯಂತೆ ಬ್ಯಾಗ್ ಹಾಕಿಕೊಂಡಿದ್ದ. ಕೆಲ ಕಾಲ ಬ್ಯಾಂಕಿನಲ್ಲಿ ಅಲ್ಲಿಂದ ಇಲ್ಲಿ ಓಡಾಡಿದ ದುಷ್ಕರ್ಮಿ ನಂತರ ತನ್ನ ಬಳಿ ಇದ್ದ ರಿವಾಲ್ವರ್ ತೆಗೆದು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾನೆ.
ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಗಳನ್ನು ಕೆಳಗೆ ಹಾಕಿ, ಕೈ ಮೇಲೆತ್ತಿ ನಿಂತು ಕೊಳ್ಳಿ ಎಂದು ಅಬ್ಬರಿಸಿದ್ದಾನೆ. ಈ ಸಮಯದಲ್ಲಿ ಕ್ಯಾಶ್ ಕೌಂಟರ್ ಬಳಿ ಇದ್ದ ಮುರಳಿಧರ್ ಅವರು ಆತನ ಆದೇಶ ಪಾಲಿಸದೆ ಮುಂದೆ ಬರಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ದುಷ್ಕರ್ಮಿ ಗುಂಡು ಹಾರಿಸಿ ಮುರಳಿಧರ್ ಅವರ ಬಲ ತೋಳನ್ನು ಗಾಯಗೊಳಿಸಿದ್ದಾನೆ.
ನಂತರ ಕ್ಯಾಶಿಯರ್ ಬಳಿ ಬಂದು 10 ಲಕ್ಷ ರು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬ್ಯಾಂಕಿನಲ್ಲಿರುವ ಸಿಸಿಟಿವಿ ಕೆಮರಾ ರೆಕಾರ್ಡಿಂಗ್ ಇನ್ನೂ ಪರಿಶೀಲಿಸಬೇಕಿದೆ. ದರೋಡೆ ನಡೆದ ಸಂದರ್ಭದಲ್ಲಿದ್ದ ಎಲ್ಲಾ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸೋಲದೇವನಹಳ್ಳಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.












Click it and Unblock the Notifications