ಮಿ. ಬಿಎಸ್ ವೈ, ಅಡ್ವಾಣಿ ಬಗ್ಗೆ ಹಗುರ ಮಾತು ಬೇಡ

ಬಿಎಸ್ ಯಡಿಯೂರಪ್ಪ ಅವರು ತಳಮಟ್ಟದಿಂದ ಬೆಳೆದು ಬಂದ ನಾಯಕ. ಅವರು ರಾಜಕೀಯ ಕ್ಷೇತ್ರದಲ್ಲಿ ಕಂಡ ಪ್ರಗತಿ ಹಾಗೂ ತಂದ ಸುಧಾರಣೆಗಳು ಅನುಕರಣೀಯ. ಅದರೆ, ಪಕ್ಷದ ಬಲದಿಂದ ಬೆಳೆದ ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರನ್ನೇ ದೂಷಿಸುವುದು ಸರಿಯಲ್ಲ ಎಂದು ವೆಂಕಯ್ಯ ನಾಯ್ಡು ಅವರು ಹೇಳಿದರು.
ಪಕ್ಷ ತೊರೆಯುವುದು ಬಿಎಸ್ ವೈ ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ತರೀಕೆರೆಯಲ್ಲಿ ಬಿಎಸ್ ವೈ: ನಮ್ಮ ತಂಟೆಗೆ ಬಂದರೆ ಶೆಟ್ಟರ್ ಸರ್ಕಾರ ಉಳಿಯುವುದಿಲ್ಲ .ಈಶ್ವರಪ್ಪ ಅವರು ಸುತ್ತಿ ಬಳಸಿ ಮಾತನಾಡುವುದನ್ನು ಬಿಟ್ಟು ವಿಧಾನಸಭೆ ವಿಸರ್ಜನೆ ಮಾಡಲಿ. ಬಿಜೆಪಿಗೆ ಈಗ ಈಶ್ವರಪ್ಪ ಅವರೇ ಎಲ್ಲವೂ ಆಗಿದ್ದಾರೆ.
ಈಶ್ವರಪ್ಪ ಅವರು ಮಂತ್ರಿಯಾಗಿದ್ದು ನನ್ನಿಂದಲೇ ಎಂಬುದನ್ನು ಮರೆತಿದ್ದಾರೆ. ಈಗ ಅವರ ಕೈಲಿ ಅಧಿಕಾರವಿದೆ. ಸರ್ಕಾರ ಪತನಗೊಳಿಸಲಿ, ವಿಧಾನಸಭೆ ವಿಸರ್ಜಿಸಿ, ಜನತಾ ಜನಾರ್ದನದ ಮುಂದೆ ನಿಲ್ಲಲಿ. ಮುಂದಿನ ಚುನಾವಣೆಯಲ್ಲಿ ತಮ್ಮ ತಾಕತ್ ತೋರಿಸಲಿ ಎಂದು ಬಿಎಸ್ ಯಡಿಯೂರಪ್ಪ ಅವರು ನೇರವಾಗಿ ಸವಾಲು ಹಾಕಿದ್ದಾರೆ.
ಪ್ರಧಾನ್ ಗುಡುಗು : ಬಿಜೆಪಿ ಹಾಗೂ ಕೆಜೆಪಿ ಸಮರದಲ್ಲಿ ಯಡಿಯೂರಪ್ಪ ಕಡೆಯವರಿಂದ ಸವಾಲು ಸ್ವೀಕರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಕೆಜೆಪಿಗೆ ಹೋಗುವವರು ಹೋಗಲಿ, ಸರ್ಕಾರ ಬಿದ್ದರೂ ಚಿಂತೆಯಿಲ್ಲ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಬೆಳೆದ ಪಕ್ಷ. ಯಡಿಯೂರಪ್ಪ ಹೋದರೂ ಚಿಂತೆಯಿಲ್ಲ. ನಮಗೆ ನೈತಿಕತೆ ಮುಖ್ಯ. ಅಧಿಕಾರ ಎಂದಿಗೂ ಶಾಶ್ವತವಲ್ಲ ಎಂದು ಪ್ರಧಾನ್ ಹೇಳಿಕೆ ನೀಡಿದ್ದರು.
ಈ ಮೂಲಕ ಯಡಿಯೂರಪ್ಪ ಅವರ ಮನ ಓಲೈಕೆಗೆ ಮಾಡಲು ಬಿಜೆಪಿ ಕಟ್ಟಕಡೆಯ ಪ್ರಯತ್ನ ನಡೆಸಿದೆ ಎಂಬ ಸುದ್ದಿಗೆ ಪ್ರಧಾನ್ ಗುದ್ದು ನೀಡಿದ್ದರು.
ಈಶ್ವರಪ್ಪ ಹೇಳಿಕೆ : ಇದರಿಂದ ಚೇತನ ಪಡೆದ ಈಶ್ವರಪ್ಪ ಕೂಡಾ ಪ್ರತಿಕ್ರಿಯೆ ನೀಡಿ, ಮದುವೆ ಒಬ್ಬನ ಜೊತೆ ಸಂಸಾರ ಇನ್ನೊಬ್ಬನ ಜೊತೆ ಮಾಡುವುದನ್ನು ಸಮಾಜ ಒಪ್ಪುವುದಿಲ್ಲ. ಕೆಜೆಪಿಗೆ ಹೋಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಈಶ್ವರಪ್ಪ ಎಚ್ಚರಿಸಿದ್ದರು.
ಶಿವನಗೌಡ ಪಾಟೀಲ್ : ನಾನು ಬಿಜೆಪಿ ಶಾಸಕ, ಕೆಜೆಪಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ. ಬಂದರೂ ನಾನು ಹೋಗುವುದಿಲ್ಲ. ಯಡಿಯೂರಪ್ಪ ಅವರ ಬೆಂಬಲಿಗನಾಗಿ ಹಾವೇರಿಯಲ್ಲಿ ಡಿ.9 ರಂದು ನಡೆಯುವ ಸಮಾರಂಭಕ್ಕೆ ಹೋಗುತ್ತಿದ್ದೇನೆ ಎಂಬ ಸುದ್ದಿ ಸುಳ್ಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ಪಾಟೀಲ್ ಹೇಳಿದ್ದಾರೆ.












Click it and Unblock the Notifications