ಅವಧಿಗೆ ಮುನ್ನವೇ ಚುನಾವಣೆ ಎಂದ ಕೋಡಿಶ್ರೀಗಳು

'ಕೈಲಾಸ ಗಂಟೆ ಬಾರಿಸಿತು. ಧನ ಕನಕ ವಸ್ತ್ರಾದಿಗಳ ಬೆಲೆ ಹೆಚ್ಚಾದೀತು, ಮಳೆ ಎಲ್ಲೆಡೆ ಆವರಿಸಿತು' ಎಂದು ತಾಳೆಗರಿಯಲ್ಲಿ ಹೇಳಿದೆ. ಅದರಂತೆ ಡಿಸೆಂಬರ್ ವೇಳೆ ಭಾರಿ ಮಳೆ ಬೀಳಲಿದೆ. ಚಿನ್ನ, ಬೆಳ್ಳಿ, ಆಭರಣ ಬೆಲೆ ಹೆಚ್ಚಾಗಲಿದೆ. ಆಹಾರ ಧಾನ್ಯ, ಅಗತ್ಯ ವಸ್ತುಗಳ ಬೆಲೆ ಕೂಡಾ ಗಗನಕ್ಕೇರಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಹಾಗೂ ಕೇಂದ್ರದಲ್ಲಿ ಅವಧಿಗೆ ಮುನ್ನ ಚುನಾವಣೆ ಬರಲಿದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಎರಡೂ ಕಡೆ ಸಮ್ಮಿಶ್ರ ಸರ್ಕಾರ ಕಾಣಿಸಿಕೊಳ್ಳಲಿದೆ. ರಾಜ್ಯದಲ್ಲಿ ಸರ್ಕಾರ ಅಸ್ಥಿರವಾಗಿ ಮುಂದುವರೆಯಲಿದೆ ಎಂದರು.
ಇನ್ನೊಂದು ರಾಜಕೀಯ ರಹಸ್ಯ ತಿಳಿದಿದೆ. ಹಿರಿಯ ನಾಯಕರ ಭವಿಷ್ಯ ಇದರಲ್ಲಿ ಅಡಗಿದೆ. ಅದನ್ನು ಈಗ ಬಹಿರಂಗಗೊಳಿಸಲಾರೆ. ಕಾಲ ಕೂಡಿ ಬಂದಿಲ್ಲ. ಹೀಗಾಗಿ ಗುಟ್ಟು ಬಚ್ಚಿಟ್ಟುಕೊಳ್ಳಬೇಕಾಗಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಪ್ರಳಯದ ಭಯ ಬೇಡ: ಪ್ರಳಯ ಏನು ಆಗೊಲ್ಲ. ಪ್ರಾಕೃತಿಕ ದೋಷವಾಗಲಿದೆ ಎಂದು ಸ್ವಾಮೀಜಿ ಪುನರುಚ್ಚರಿಸಿದ್ದಾರೆ. ಡಿ.21 ರಂದು 6 ಗಂಟೆ ನಂತರ ಪ್ರಳಯ ಗ್ಯಾರಂಟಿ ಎಂದು ಎಲ್ಲೆಡೆ ನಂಬಲಾಗಿದೆ. ಆದರೆ, ಡಿ.12, 21 ಬರೀ ದಿನಾಂಕಗಳಾಗಿದ್ದು, ಖಗೋಳ ಕೌತುಕವಾಗಲಿ, ಹವಾಮಾನ ವೈಪರೀತ್ಯವಾಗಲಿ ಜಗತ್ತಿನ ಪ್ರಳಯಕ್ಕೆ ಕಾರಣವಾಗುವುದಿಲ್ಲ ಎಂದು ಸ್ವಾಮೀಜಿ ಈ ಹಿಂದೆ ಹೇಳಿದ್ದರು.
ಪ್ರಪಂಚದ ಯಾವುದೋ ಮೂಲೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆಯಾದರೂ, ಇಡೀ ಭೂಮಂಡಲ ನಾಶವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಸಾರ್ವಜನಿಕರು ಭಯ ಪಡದೆ ಧೈರ್ಯವಾಗಿ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಬಹುದು.
ಶಾಖದ ಕಾರಣಕ್ಕೆ ಹಿಮ ಭಾರಿ ಪ್ರಮಾಣದಲ್ಲಿ ಕರಗುತ್ತದೆ. ಇದು ಪ್ರಕೃತಿ ವಿಕೋಪಕ್ಕೆ ತಿರುಗಿ ಶೀತಲ ರಾಷ್ಟ್ರಗಳಿಗೆ ತೊಂದರೆ ಆಗುವುದು ಸಹಜ. ಹೆಚ್ಚುತ್ತಿರುವ ಅಂತರ್ಜಲದ ಬಳಕೆಯ ಕಾರಣಕ್ಕೆ ಶಿಲಾಗೋಳಕ್ಕೆ ತೀವ್ರ ಧಕ್ಕೆ ಆಗುತ್ತಿದೆ.
ಇದರಿಂದ ಭೂಕಂಪದ ತಡೆಗೆ ಅಂತರ್ಜಲ ಬಳಕೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಅಪಾಯ ಶತಸಿದ್ಧ' ಕಾರ್ತಿಕ ಮಾಸದೊಳಗೆ ಗಂಭೀರ ಅವಘಡವೊಂದು ಕಾದಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.












Click it and Unblock the Notifications