ಪತ್ರಕರ್ತ ನವೀನ್ ಜಾಮೀನು ಅರ್ಜಿ ವಜಾ

ನಗರದ 3ನೇ ಜೆಎಂಎಫ್ ಸಿ ನ್ಯಾಯಾಲಯ ಶನಿವಾರ(ನ.17) ಪ್ರಕರಣದಲ್ಲಿ 44ನೇ ಆರೋಪಿಯಾಗಿರುವ ನವೀನ್ ಸೂರಿಂಜೆ ಅವರ ಅರ್ಜಿಯನ್ನು ನಿರಾಕರಿಸಿದೆ.
ನವೆಂಬರ್ 7ಕ್ಕೆ ಬಂಧಿತ ನವೀನ್ ಅವರನ್ನು ಅದೇ ರಾತ್ರಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಲಾಗಿತ್ತು. ನವೆಂಬರ್ 13ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನವೆಂಬರ್ 13ಕ್ಕೆ ನವೀನ್ ಪರ ವಕೀಲ ಜಾಮೀನಿಗಾಗಿ ವಾದ ಮಂಡಿಸಿದ್ದರೂ ಮಂಗಳೂರು ಗ್ರಾಮಾಂತರ ಪೊಲೀಸರು
ಬಂಧನ ವರದಿ ನೀಡಿಕೆಗೆ ವಿಳಂಬ ಮಾಡಿದ್ದರು.
ಹೀಗಾಗಿ ಪ್ರಕರಣ ನವೆಂಬರ್ 16ಕ್ಕೆ ಮುಂದೂಡಲ್ಪಟ್ಟಿತ್ತು. ಸೂರಿಂಜೆ ಅವರನ್ನು ಇನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ ಎಂಬ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಇದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತನಿಖೆಯಾಗಬೇಕಾದ ಪ್ರಕರಣವಾಗಿದೆ. ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತು ಪಿಐಎಲ್ ಮತ್ತು ಇನ್ನಿತರ ಪಿಟಿಷನ್ ಗಳು (ಸೂರಿಂಜೆಯನ್ನು ಕೇಸಿನಿಂದ ಕೈಬಿಡಬೇಕೆಂಬ) ಇತ್ಯರ್ಥವಾಗಿಲ್ಲ. ಇದೇ ಪ್ರಕರಣದಲ್ಲಿ ಈಗಾಗಲೇ ಕೆಲವು ಆರೋಪಿಗಳು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ತಿರಸ್ಕರಿಸಲ್ಪಟ್ಟಿವೆ ಎಂಬ ಕಾರಣ ನೀಡಲಾಗಿದೆ.
ಪತ್ರಕರ್ತ ನವೀನ್ ಸೂರಿಂಜೆ ಬಂಧನ ವಿರೋಧಿಸಿ ರಾಜ್ಯಾದ್ಯಂತ ಪಕ್ಷಾತೀತವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಭಾರಿ ಪ್ರತಿಭಟನೆಗಳು ನಡೆದಿತ್ತು.
ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಜುಲೈ 28ರಂದು ನಡೆದ ದಾಳಿ ಸಂಬಂಧ ಕಸ್ತೂರಿ ನ್ಯೂಸ್ 24/7 ಚಾನೆಲಿನ ವರದಿಗಾರ ನವೀನ್ ಸೂರಿಂಜೆ ಅವರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಲು ಹೊಟಿರುವುದಲ್ಲದೆ, ಪೊಲೀಸರ ಕೈಗೆ ರಾಜ್ಯವನ್ನು ಕೊಟ್ಟಿದೆ. ಪೊಲೀಸರ ವರ್ತನೆ ನಾಚಿಕೆಗೇಡು ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ಎಸ್‌ಡಿಪಿಐ ಸಹಿತ ಹಲವು ರಾಜಕೀಯ ಪಕ್ಷಗಳು ಹಾಗೂ ಇನ್ನೂ ಹಲವಾರು ಸಂಘಟನೆಗಳು ನವೀನ್ ಬಂಧನವನ್ನು ಖಂಡಿಸಿವೆ.
ಮಾಧ್ಯಮದವರು ಇದೇ ರೀತಿ ವರದಿ ಮಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ನವೀನ್ ಅವರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಕಾರ್ಯ ಕೈಗೊಂಡಿದೆ' ಎಂದು ರಾಜಕೀಯ ಮುಖಂಡರು ಟೇಕಿಸಿದ್ದರು.












Click it and Unblock the Notifications