ಬೆಂಗಳೂರನ್ನು ಈ ಬಾರಿ ಗಡಗಡ ನಡುಗಿಸಲಿದೆ ಚಳಿ

ಚಳಿ ಚಳಿ ತಾಳೆನು ಈ ಚಳಿಯಾ...!?:
ಹೌದು ಚಳಿಗಾಲ ಆಗಲೇ ಬೆಂಗಳೂರನ್ನು ತಬ್ಬಿಕೊಂಡಿದೆ. ನಿನ್ನೆ ಗುರುವಾರವಂತೂ 13 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ. ಇನ್ನರೆಡು ದಿನದಲ್ಲಿ ಚಳಿ ಇನ್ನೂ ಹೆಚ್ಚಾಗಲಿದೆ.
'ಈ ಬಾರಿ ಮಳೆರಾಯ ಬೆಂಗಳೂರಿಗೆ ಬಂದಿದ್ದು ಅಷ್ಟರಲ್ಲೇ ಇದೆ. ಆದರೂ ಈ ಪಾಟಿ ಚಳಿಯಾಕೋ ಶಿವಾ' ಎಂದು ಜನ 'ಈಗಲೇ ಶಿವರಾತ್ರಿ ಬರ ಬಾರದಾ? ಶಿವ ಶಿವಾ ಅಂದರೆ ಮುಗಿದ್ಹೋಗುತ್ತೆ ಚಳಿ ಸಹವಾಸ' ಎನ್ನುತ್ತಿದ್ದಾರೆ. ಮಕ್ಕಳು ಮರಿಗಳಿಗೆ ತುಟಿ ಒಡೆಯೋದು, ಕಾಲೊಡೆಯೋದು ಶುರುವಾಗಿದೆ.
ಆದರೆ 2 ವಾರದ ಹಿಂದೆ ನೀಲಂ ಸೈಕ್ಲೋನ್ ಕಾಣಿಸಿಕೊಂಡಾಗಲೂ ಬೆಂಗಳೂರಿಗರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಅಕಸ್ಮಾತ್ ಅಂತಹುದೇ ಒಂದು ಸೈಕ್ಲೋನ್ ಈಗೇನಾದರೂ ಬಂದರೆ ಮುಗೀತು ಕಥೆ. ಚಳಿ ವಿಪರೀತ ಎನಿಸುವಷ್ಟು ಬೆಂಗಳೂರಿಗರನ್ನು ಕಾಡಲಿದೆ.
ಮತ್ತೊಂದು ವಿಷ್ಯವೆಂದರೆ ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಒಂದು ಮಳೆ ಬಂದುಹೋಗುತ್ತದೆ. ಆದರೆ ಈ ಬಾರಿ ದೀಪಾವಳಿ ತಡವಾಗಿ ಬಂದಿದ್ದರಿಂದ ಸದ್ಯ ದೀಪಾವಳಿಗೆ ಮಳೆಯಾಗಿಲ್ಲ.
ವಾಸ್ತವವಾಗಿ ಚಳಿಗಾಲಕ್ಕೆ ಇನ್ನೂ 2 ವಾರ ಬಾಕಿಯಿದೆ. ಆದರೆ ಅದಾಗಲೇ ಮೂಡಣ ದಿಕ್ಕಿನಿಂದ ಕರ್ನಾಟಕದೊಳಕ್ಕೆ ಒಣ ಗಾಳಿ ನುಸುಳುತ್ತಿದೆ. ಹಾಗಾಗಿ ಈ ಚಳಿಗಾಲದ ದಿಢೀರ್ ಆಗಮನ, ದೂರದ ರಾಯಚೂರಿನಲ್ಲಿ 11.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ 120 ವರ್ಷಗಳಲ್ಲಿ ಅತ್ಯಂತ ಕಡಿಮೆ ತಾಪಮಾನವಾಗಿದೆ. ಚಾಮರಾಜನಗರವಂತೂ 9.5 ಡಿಗ್ರಿಯಲ್ಲಿದೆ.
'ಎರಡು ದಿನಗಳಿಂದ ಬೆಂಗಳೂರಿನ ಸುತ್ತಮುತ್ತ 10 ಡಿಗ್ರಿ ತಾಪಮಾನ ದಾಖಲಾಗಿದೆ. ಕರ್ನಾಟಕದ ಇತರೆ ಭಾಗಗಳಲ್ಲೂ ತಾಪಮಾನ ಹೀಗೆ ಕುಸಿಯಲಿದೆ. ಆಕಾಶ ಸ್ವಚ್ಛವಾಗಿದೆ. ರಾತ್ರಿ ಹೊತ್ತು ತಾಪಮಾನ ಕಡಿಮೆಯಾಗುವುದಕ್ಕೆ ಇದೂ ಕಾರಣವಾಗಿದೆ. ಇನ್ನು ಮುಂಗಾರು ದುರ್ಬಲವಾಗಿ ಅಂತಿಮ ದಿನಗಳಲ್ಲಿದೆ' ಎನ್ನುತ್ತಾರೆ ಹವಾಮಾನ ಇಲಾಖೆ ನಿರ್ದೇಶಕ ಬಿ ಪುಟ್ಟಣ್ಣ.
ಕೃಷಿ ಹವಾಮಾನ ತಜ್ಞ ಎಂಬಿ ರಾಜೇಗೌಡ ಅವರು ಹೇಳುವಂತೆ ಇಡೀ ಕರ್ನಾಟಕದ ಒಳ ಪ್ರದೇಶಗಳತ್ತ ಮೂಡಣ ದಿಕ್ಕಿನಿಂದ ಒಣಗಾಳಿ ಜತೆಗೆ ಶೀತಗಾಳಿಯೂ ನುಸುಳುತ್ತಿದೆ. ಆದ್ದರಿಂದ ದಿಢೀರನೆ ಚಳಿ ಕಾಣಿಸಿಕೊಂಡಿದೆ. ಕರ್ನಾಟಕದ ಇತರೆ ಭಾಗಗಳಲ್ಲು ಇದೇ ಪರಿಸ್ಥಿತಿ ಕಾಣಿಸಿಕೊಳ್ಳಲಿದೆ. ಇದು ಜನವರಿ ಮಧ್ಯ ಭಾಗದವರೆಗೂ ಮುಂದುವರಿಯಲಿದೆ.












Click it and Unblock the Notifications