ಈಶ್ವರಪ್ಪಾ, ನಾನೊಬ್ಬ ಭಂಡ ತಿಳ್ಕೊಳ್ಳಿ- ಯಡಿಯೂರಪ್ಪ

'ಈಗಿನ ನಿಮ್ಮ ಶೆಟ್ಟರ್ ಸರಕಾರ ಅವಧಿ ಪೂರ್ಣಗೊಳಿಸಬೇಕೆಂದರೆ ತೆಪ್ಪಗಿರಿ' ಎಂದೂ ಯಡಿಯೂರಪ್ಪನವರು ಈಶ್ವರಪ್ಪಗೆ ಶುಕ್ರವಾರ ದಾವಣಗೆರೆಯಿಂದ ಖಡಕ್ಕಾದ ಎಚ್ಚರಿಕೆ ರವಾನಿಸಿದ್ದಾರೆ.
'ಹಾವೇರಿಯಲ್ಲಿ ಬಿಜೆಪಿ ಶಾಸಕರು/ಮಂತ್ರಿಗಳು ಭಾಗವಹಿಸುವುದು ಶತಃಸಿದ್ಧ. ಅದನ್ನು ನಿಮ್ಮಿಂದ ತಪ್ಪಿಸಲಾಗದು' ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದ್ದಾರೆ.
ನಿನ್ನೆ ಗುರುವಾರ ಈಶ್ವರಪ್ಪ ಏನು ಹೇಳಿದ್ದರೆಂದರೆ... ಡಿ. 9ರಂದು ಹಾವೇರಿಯಲ್ಲಿ ಯಡಿಯೂರಪ್ಪ ಆಯೋಜಿಸಿರುವ ಕೆಜೆಪಿ ಸಮಾವೇಶದಲ್ಲಿ ಬಿಜೆಪಿಯ ಶಾಸಕರು, ಸಚಿವರು ಮತ್ತು ಸಂಸದರು ಪಾಲ್ಗೊಂಡರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿಯೂ ಆದ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಕಟ್ಟೆಚ್ಚರ ನೀಡಿದ್ದರು.
ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಇದುವರೆಗೂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಆದರೆ, ಬಿಜೆಪಿಯಲ್ಲಿ ಉಳಿಯಬೇಕೋ, ಬಿಡಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು ಎಂದೂ ಈ ಹಿಂದೆ ಡಾ. ಯಡಿಯೂರಪ್ಪ ಅವರಿಂದ 'ಬೃಹಸ್ಪತಿ' ಎಂದು ಕರೆಸಿಕೊಂಡಿದ್ದ ಈಶ್ವರಪ್ಪ ತೀಕ್ಷ್ಣವಾಗಿ ನುಡಿದಿದ್ದರು.
ಜತೆಗೆ, ಯಡಿಯೂರಪ್ಪ ಹೇಳಿಕೆಗಳಿಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುವುದಾಗಿಯೂ ಈಶ್ವರಪ್ಪ ನಿನ್ನೆ ತಿಳಿಸಿದ್ದರು. ಇದಕ್ಕೆ ಉತ್ತರವಾಗಿ 'ತೆಪ್ಪಗಿರುವಂತೆ ಈಶ್ವರಪ್ಪಗೆ' ಯಡಿಯೂರಪ್ಪ ಇಂದು ಸೂಚಿಸಿದ್ದಾರೆ.












Click it and Unblock the Notifications