ಅರುಣ್ ಜೇಟ್ಲಿ- ಯಡಿಯೂರಪ್ಪ ಸಂಧಾನ ವಿಫಲ

ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಅವರ ಬೆಂಬಲಿಗರ ಮೂಲಕ ಸಂಪರ್ಕಿಸಲು ಯತ್ನಿಸಿ ಜೇಟ್ಲಿ ಸೋತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿದ ಜೇಟ್ಲಿ ನಗರದ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಾರೆ.
ಆರೆಸ್ಸೆಸ್ ಮುಖಂಡರೊಬ್ಬರ ಮನೆಯಲ್ಲಿ ಯಡಿಯೂರಪ್ಪ ಅವರನ್ನು ಸಂಧಿಸಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಇದೆ. ಜೊತೆಗೆ ಇನ್ನೆರಡು ದಿನ ಇದೇ ಪ್ರಯತ್ನ ಮುಂದುವರೆಸಲಿದ್ದಾರೆ ಎನ್ನಲಾಗಿದೆ.
ಆದರೆ, ಕೇಂದ್ರ ನಾಯಕರೊಡನೆ ಯಡಿಯೂರಪ್ಪ ಭೇಟಿ ಮಾಡುವ ಕಾಲ ಮುಗಿದಿದೆ. ಅವರು ಯಾವ ಸಂಧಾನಕ್ಕೂ ಸಿದ್ಧವಿಲ್ಲ ಎಂದು ಕೆಜೆಪಿ ಮೂಲಗಳು ಹೇಳಿದೆ.
ಯಡಿಯೂರಪ್ಪ ಪ್ರತಿಕ್ರಿಯೆ: 'ಅರುಣ್ ಜೇಟ್ಲಿ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ, ನಾನು ನನ್ನ ಈ ಹಿಂದಿನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಕೇಂದ್ರದ ಯಾವೊಬ್ಬ ನಾಯಕರ ಜೊತೆಗೂ ನಾನು ಮಾತುಕತೆ, ಸಂಧಾನ ನಡೆಸಲಾರೆ.
ಸೇಡಿನಿಂದ ನಾನು ಬಿಜೆಪಿಯನ್ನು ತೊರೆಯುತ್ತಿಲ್ಲ. ಕರ್ನಾಟಕದ ಅಭಿವೃದ್ಧಿಗಾಗಿ ನನ್ನದೇ ಆದ ಕನಸು ಕಂಡಿದ್ದೇನೆ. ನನ್ನ ಕನಸು ಸಾಕಾರಗೊಳ್ಳಲು ಹೊಸ ಪಕ್ಷ ಸ್ಥಾಪನೆ ಅಗತ್ಯ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನನ್ನ ಕನಸು ರಾಜ್ಯದ ಮುಖ್ಯಮಂತ್ರಿ ಅಥವಾ ಇನ್ಯಾವುದೇ ಉನ್ನತ ಹುದ್ದೆ ಅಲಂಕರಿಸುವುದಲ್ಲ. ಕರ್ನಾಟಕದ ಅಭಿವೃದ್ಧಿ ನನ್ನ ಕನಸು. ಬಿಜೆಪಿಯಲ್ಲಿದ್ದು ಕನಸು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಜೇಟ್ಲಿ ಆಫರ್ : ಯಡಿಯೂರಪ್ಪ ಅವರು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು ಭಾರಿ ಆಫರ್ ಒಡ್ಡಿದ್ದಾರೆ. ಯಡಿಯೂರಪ್ಪ ಅವರನ್ನು ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿಸುವುದು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸುವುದು ಈಗಿನ ಆಫರ್ ಆಗಿದೆ.
ಜೊತೆಗೆ ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರನ್ನು ಅಥವಾ ಅವರು ಹೇಳಿದವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ನಿರೀಕ್ಷೆಯಂತೆ ಬಿಎಸ್ ಯಡಿಯೂರಪ್ಪ ಅವರು ಯಾವುದೇ ಆಮಿಷಕ್ಕೆ ಒಪ್ಪಿಕೊಂಡಿಲ್ಲ ಹಾಗೂ ಬಿಜೆಪಿ ಸಂಧಾನ ಪ್ರಕ್ರಿಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಈ ನಡುವೆ ಕೆಜೆಪಿಯಲ್ಲಿ ಕಾಣಿಸಿಕೊಂಡಿರುವ ಯಡಿಯೂರಪ್ಪ ಬೆಂಬಲಿಗರ ಮೇಲೆ ಬಿಜೆಪಿ ಕ್ರಮ ಜರುಗಿಸಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ನೀಡಿರುವ ಹೇಳಿಕೆ ಬಗ್ಗೆ ಯಡಿಯೂರಪ್ಪ ಗರಂ ಆಗಿದ್ದಾರೆ.












Click it and Unblock the Notifications