500 ಕೋಟಿ ತೂಗುವ ಗೌರಮ್ಮ, ಗೋವಿಂದ ಲೋಕಾ ಬಲೆಗೆ
ಬಿಬಿಎಂಪಿ ಆಜಾದ್ ನಗರ (ವಾರ್ಡ್ ನಂ. 141) ಕಾಂಗ್ರೆಸ್ ಸದಸ್ಯೆ ಗೌರಮ್ಮ ಗೋವಿಂದರಾಜು ಅವರ ನಾಲ್ಕು ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ ಪಿ ಶಿವರಾಮರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
500 ಕೋಟಿ ಬಾಳುವ ದಂಪತಿ: ಗೌರಮ್ಮ ಅವರ ಪತಿ ಗೋವಿಂದ ರಾಜು ಕೆಲ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿದ್ದ. ಆದರೆ, ಈಗ 500 ಕೋಟಿ ರು. ಒಡೆಯ. ಗೋವಿಂದರಾಜ್ ಆಸ್ತಿ ಈ ಪರಿ ಬೆಳೆಯಲು ರಿಯಲ್ ಎಸ್ಟೇಟ್ ದಂಧೆ ಕಾರಣ ಎಂದು ತಿಳಿದು ಬಂದಿದೆ.
ಸರ್ಕಾರಿ ನೌಕರಿ ಮಾಡುತ್ತಲೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೈ ಕುದುರಿಸಿಕೊಂಡಿದ್ದ ಗೋವಿಂದರಾಜ್ ಕೇವಲ 10 ವರ್ಷಗಳಲ್ಲಿ 500 ಕೋಟಿ ರು. ಒಡೆಯನಾಗಿದ್ದಾರೆ.
ಸರ್ಕಾರಿ ಸಂಬಳ 10 ರಿಂದ 12 ಸಾವಿರ ರು. ಸಂಬಳ ಪಡೆಯುತ್ತಿದ್ದ ಗೋವಿಂದ ರಾಜು ತನ್ನ ರಿಯಲ್ ಎಸ್ಟೇಟ್ ದಂಧೆ ಮುಚ್ಚಿ ಹಾಕಿಕೊಳ್ಳಲು ರಾಜಕೀಯ ಪ್ರವೇಶಿಸಿದ. ದಿನ ಕಳೆದಂತೆ ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡ. ನಂತರ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಪೂರ್ಣಾವಧಿಯಾಗಿ ರಾಜಕೀಯಕ್ಕೆ ಇಳಿದು ಬಿಟ್ಟ.
ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಕ್ಕಿದ ಮೇಲೆ ಅಜಾದ್ ನಗರ ವಾರ್ಡ್ ನಲ್ಲಿ ತನ್ನ ಪತ್ನಿ ಗೌರಮ್ಮ ಅವರನ್ನು ನಿಲ್ಲಿಸಿ ಗೆಲ್ಲಿಸಿದ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದಕ್ಕಾಗಿ ಆರ್ ವಿ ದೇವರಾಜ್ ಹಿಂದೆ ಬಿದ್ದಿದ್ದಾರೆ ಎಂಬ ಸುದ್ದಿ ಚಾಮರಾಜಪೇಟೆ ಗಲ್ಲಿ ಗಲ್ಲಿಗಳಲ್ಲಿ ಹಬ್ಬಿತ್ತು.
2.21 ಕೋಟಿ ರು ನಗದು ವಿವಿಧ ಬ್ಯಾಂಕ್ ಗಳಲ್ಲಿ ಇಟ್ಟಿದ್ದಾರೆ. ಮೂರು ಸೈಟ್ ಹೊಂದಿದ್ದಾರೆ. ನಾಲ್ಕು ಮನೆಗಳಿದೆ. ಒಟ್ಟು 14.68 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿದೆ. 48 ಲಕ್ಷ ರು ಮೌಲ್ಯದ ಚಿನ್ನ 21 ಕೆಜಿ ಬೆಳ್ಳಿ, 3.83 ಲಕ್ಷ ರು ನಗದು ವಶಪಡಿಸಿಕೊಳ್ಳಲಾಗಿದೆ. ಆಸ್ತಿ ಮೌಲ್ಯಮಾಪನೆ ಜಾರಿಯಲ್ಲಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಬಾತ್ ರೂಮನಲ್ಲಿತ್ತು ಹಣ: ಕೋಟ್ಯಂತರ ನೋಟಿನ ಕಂತೆ ಮೂಟೆಗಳಲ್ಲಿ ತುಂಬಿ ಬಾತ್ ರೂಮಿನಲ್ಲಿ ಬಚ್ಚಿಡಲಾಗಿತ್ತು. ಇನ್ನಷ್ಟು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಒಡವೆಗಳನ್ನು ಬ್ಯಾಂಕ್ ಸೇಫ್ ಲಾಕರ್ ನಲ್ಲಿಟ್ಟಿರುವ ಮಾಹಿತಿ ಸಿಕ್ಕಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಾಮರಾಜಪೇಟೆ ಟಿಆರ್ ಮಿಲ್ ರಸ್ತೆಯ ನಂಜಾಂಬ ಅಗ್ರಹಾರದಲ್ಲಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ಗೋವಿಂದರಾಜು ವಾಸವಾಗಿದ್ದಾರೆ. ಅವರ ಕಾರು ಚಾಲಕ ಪ್ರಕಾಶ್ ಮೇಲೆ ಲೋಕಾಯುಕ್ತರು ಮೊದಲಿಗೆ ಬಲೆ ಬೀಸಿದ್ದಾರೆ.
ಗೋವಿಂದರಾಜು ಅವರಿಗೆ ಸೇರಿದ ಕೋಟ್ಯಂತರ ರು ಬೆಲೆ ಬಾಳುವ ಆಸ್ತಿ ಪತ್ರಗಳು ಹಾಗೂ ಎರಡು ಚೀಲ ತುಂಬಿಟ್ಟಿದ್ದ ಹಣದ ಥೈಲಿಗಳನ್ನು ಬಾತ್ ರೂಮ್ ನಲ್ಲಿ ಬಚ್ಚಿಟ್ಟಿರುವ ವಿಷಯವನ್ನು ಪ್ರಕಾಶ್ ಬಾಯ್ಬಿಟ್ಟಿದ್ದ.
ಇದಲ್ಲದೆ ನಗರದ ವಿವಿಧ ಪ್ರದೇಶಗಳಲ್ಲಿ ಗೋವಿಂದರಾಜ್ ಹೊಂದಿರುವ ಮನೆಗಳ ಮಾಹಿತಿ ಕೂಡಾ ನೀಡಿದ್ದ. ಮಾಹಿತಿ ದೃಢಪಟ್ಟ ಮೇಲೆ ಏಕಕಾಲಕ್ಕೆ ಎಲ್ಲೆಡೆ ದಾಳಿ ನಡೆಸಿ ಆಸ್ತಿ ಸಂಪಾದನೆ ಕಾಗದ ಪತ್ರಗಳು ಹಾಗೂ ಕೋಟ್ಯಂತರ ರು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಗೌರಮ್ಮ ಹಾಗೂ ಗೋವಿಂದ ಅವರ ಆಸ್ತಿ ಮೌಲ್ಯಮಾಪನ ಜಾರಿಯಲ್ಲಿದ್ದು ಲೋಕಾಯುಕ್ತ ಪೊಲೀಸರು ಅಧಿಕೃತ ಹೇಳಿಕೆ ಇನ್ನೂ ಹೊರಹಾಕಬೇಕಿದೆ.
ಗೌರಮ್ಮ ಹಾಗೂ ಗೋವಿಂದ ಅವರ ಆಸ್ತಿ ಮೌಲ್ಯಮಾಪನ ಜಾರಿಯಲ್ಲಿದ್ದು ಲೋಕಾಯುಕ್ತ ಪೊಲೀಸರು ಅಧಿಕೃತ ಹೇಳಿಕೆ ಇನ್ನೂ ಹೊರಹಾಕಬೇಕಿದೆ. ಈ ದಂಪತಿಗಳ ಜೊತೆಗೆ ಅವರ ಕಾರು ಚಾಲಕ ಪ್ರಕಾಶ್ ಅವರ ಮನೆ ಮೇಲೂ ದಾಳಿ ನಡೆದಿದೆ.
ಆರೋಪಿಗಳು ತಮ್ಮ ಕುಟುಂಬ ವರ್ಗದ ಪ್ರತಿಯೊಬ್ಬರ ಹೆಸರಿನಲ್ಲೂ ಅಕ್ರಮ ಆಸ್ತಿ ಮಾಡಿದ್ದಾರೆ. ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಕೋಟ್ಯಂತರ ರು.ಗಳ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್ ಎನ್ ಸತ್ಯನಾರಾಯಣ ರಾವ್ ಹೇಳಿದ್ದಾರೆ.