ಬಿಜೆಪಿ ಕೇಂದ್ರ ನಾಯಕರಲ್ಲೇ ಒಡಕು ತಂದಿಟ್ಟ ನಿತಿನ್ ಗಡ್ಕರಿ

ಮಂಗಳವಾರ (ನ 6) ಸಂಜೆ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಹಿರಿಯ ಮುಖಂಡರಾದ ಎಲ್ ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಭಾಗವಹಿಸದೇ ಇದ್ದದ್ದು ರಾಜ್ಯದಂತೆ ಕೇಂದ್ರದ ಬಿಜೆಪಿಯಲ್ಲೂ ಎಲ್ಲವೂ ಸರಿಯಲ್ಲ ಎನ್ನುವುದು ಜಗಜ್ಜಾಹೀರಾಗಿದೆ.
ಗಡ್ಕರಿ ವಿರುದ್ದ ವ್ಯಾಪಕವಾಗಿ ಹರಿದು ಬರುತ್ತಿರುವ ಟೀಕೆಯಿಂದ ಎಚ್ಚೆತ್ತ ಬಿಜೆಪಿ ತುರ್ತು ಸಭೆಯನ್ನು ನಡೆಸಿತು. ಎರಡೂ ಗಂಟೆ ಸಮಾಲೋಚನೆ ನಡೆಸಿದ ಪಕ್ಷದ ಮುಖಂಡರು ಗಡ್ಕರಿ ಕಾನೂನು ದೃಷ್ಟಿಯಿಂದ ತಪ್ಪು ಮಾಡಿಲ್ಲ. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ ಎನ್ನುವ ತೀರ್ಮನದೊಂದಿಗೆ ಸಭೆ ಮುಕ್ತಾಯಗೊಳಿಸಿದರು.
ಇದಕ್ಕೂ ಮುನ್ನ ಸಭೆಗೆ ಹಾಜರಾಗುವಂತೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್ ಮತ್ತು RSS ಮುಖಂಡರು ಆಡ್ವಾಣಿ ಮನವೊಲಿಕೆ ಯತ್ನ ನಡೆಸಿದರು. ಆದರೆ ಅದು ಫಲಕಾರಿಯಾಗಲಿಲ್ಲ. ಆಡ್ವಾಣಿ ಮತ್ತು ಜೋಷಿಯಂತೆ ಪಕ್ಷದ ಇನ್ನಿಬ್ಬರು ಹಿರಿಯ ಮುಖಂಡರಾದ ಯಶವಂತ ಸಿನ್ಹಾ ಮತ್ತು ಜಸ್ವಂತ್ ಸಿಂಗ್ ಕೂಡಾ ಗಡ್ಕರಿ ಮುಂದುವರಿಕೆಗೆ ವಿರೋಧ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಕಾರ್ಯಕಾರಿಣಿ ಸಭೆಗೆ ಮುನ್ನ ಗಡ್ಕರಿ ನಾಯಕತ್ವ ಬೆಂಬಲಿಸಬೇಕೆಂಬ ಬಿಜೆಪಿ ನಾಯಕರಿಗೆ RSS ಆದೇಶ ನೀಡಿತ್ತು ಎಂದು ವರದಿಯಾಗಿದೆ.
ಗಡ್ಕರಿ ನಾಯಕತ್ವದಲ್ಲಿ ಪೂರ್ಣ ವಿಶ್ವಾಸವಿದೆ. ಗಡ್ಕರಿ ಮೇಲೆ ಬಂದಿರುವ ಆರೋಪದ ಸಂಬಂಧ ಅವರು ಯಾವುದೇ ತನಿಖೆಗೆ ಸಿದ್ದರಿದ್ದಾರೆಂದು ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಸಭೆಯ ನಂತರ ಹೇಳಿದ್ದಾರೆ.
ಸುಳ್ಳು ವಿಳಾಸ ಮತ್ತು ಹೆಸರುಗಳನ್ನು ನೀಡಿ ಕಂಪೆನಿಗಳನ್ನು ಸ್ಥಾಪಿಸಿದ ಆರೋಪಕ್ಕೆ ಒಳಗಾಗಿರುವ ನಿತಿನ್ ಗಡ್ಕರಿ ಅವರ ಅಧಿಕಾರದ ಅವಧಿ ಡಿಸೆಂಬರ್ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ.
ಗಡ್ಕರಿ ಅವರ ಮೇಲಿರುವ ಆರೋಪಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಅವರನ್ನು ಬೆಂಬಲಿಸುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಈ ಹಿಂದೆ RSS ಮುಖಂಡರು ಹೇಳಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications