ಸಸ್ಯಕಾಶಿಯಲ್ಲಿ ಪಾರ್ಕಿಂಗ್ ಬೇಡ ಪತ್ರಕರ್ತ ಉಪಾಧ್ಯಾಯ

ಏನಾಗಿದೆ ಅಂದರೆ ಸರಕಾರವು ದಿಢೀರನೆ ಲಾಲ್ ಬಾಗ್ ಒಳಗೆ ಸಿದ್ದಾಪುರದ ಭಾಗದಲ್ಲಿ ವಿಶಾಲವಾದ ವಾಹನ ನಿಲ್ದಾಣವನ್ನು ನಿರ್ಮಿಸುತ್ತಿದೆ. ಅನಾದಿ ಕಾಲದಿಂದಲೂ ಇಲ್ಲಿಗೆ ದಿನಾ ವಾಕಿಂಗ್ ಬರುವವರಿಗೆ ಇದರಿಂದ ಸಾಕಷ್ಟು ಕಿರಿಕಿರಿಯಾಗಿದೆ. ಏಕೆಂದರೆ ಇದರಿಂದ ಪ್ರಧಾನವಾಗಿ ಸಸ್ಯಕಾಶಿಯ ಸೌಂದರ್ಯ ಮತ್ತು ಅಸ್ತಿತ್ವಕ್ಕೆ ಧಕ್ಕೆಯಾಗಿದೆ.
ಹಾಗಾಗಿ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ಇಂದು ಬೆಳಗ್ಗೆ ಟಿವಿ9 ಜತೆ ಮಾತನಾಡುತ್ತಾ ಸರಕಾರ ಪಾರ್ಕಿಂಗ್ ಲಾಟ್ ನಿರ್ಮಿಸುತ್ತಿರುವುದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಮಕೃಷ್ಣ ಏನನ್ನುತ್ತಾರೆ ಕೇಳಿ: ಅಲ್ರೀ ಸರಕಾರಕ್ಕೆ ಬುದ್ಧಿ ಇಲ್ವಾ? ಸಾರ್ವಜನಿಕರನ್ನು ಸೌಜನ್ಯಕ್ಕಾದರೂ ಒಂದು ಮಾತು ಕೇಳಬೇಕು ಎಂಬ ಪ್ರಜ್ಞೆ ಬೇಡ್ವಾ ಅವ್ರಿಗೆ? ಈಗಿನ ಸರಕಾರದ ಕಷ್ಟಪಟ್ಟು ಮಣ್ಣುನೀರು ಹಾಕಿ ಈ ಸಸ್ಯಕಾಶಿಯನ್ನು ಬೆಳೆಸಿದೆಯಾ?
ಹೈದರ್ ಅಲಿ ಅವರು ದೂರದೃಷ್ಟಿಯಿಂದ ಈ ಸಸ್ಯಕಾಶಿಯನ್ನು ಪೋಷಿಸಿದ್ದಾರೆ. ಅಂಥಾದ್ದರಲ್ಲಿ ಇವರಿಗೇನು ಅಧಿಕಾರ ಇದೆ ಅಂತ ಪಾರ್ಕಿಂಗ್ ಲಾಟ್ ಮಾಡುತ್ತಿದ್ದಾರೆ. ಮೊನ್ನೆ ಏನೋ ಕ್ಲೀನಿಂಗ್ ಮಾಡುತ್ತಿರಬೇಕು ಎಂದುಕೊಂಡು ಸುಮ್ಮನಾಗಿದ್ದೆವು. ಆದರೆ ಇಂದು ನೋಡಿದರೆ ಜಲ್ಲಿ ಹಾಕಿ, ಕಾಂಕ್ರೀಟ್ ಕಾಡನ್ನು ಬೆಳೆಸೊಕ್ಕೆ ಹೊರಟಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ.
ಅಷ್ಟಕ್ಕೂ ವರ್ಷಕ್ಕೆ ಒಂದೆರಡು ಬಾರಿ ನಡೆಸುವ ಫಲಪುಷ್ಪ ಪ್ರದರ್ಶನ ಎಂಬ ಅನಗತ್ಯದ ಆಡಂಬರಕ್ಕೆ ಬರುವವರಿಗೆ ವಾಹನ ನಿಲ್ದಾಣ ಸೌಕರ್ಯ ಕಲ್ಪಿಸಲು ಇಡೀ ವರ್ಷದುದ್ದಕ್ಕೂ ಇಲ್ಲಿ ಪಾರ್ಕಿಂಗ್ ಸ್ಥಳ ಕಾಯ್ದಿರಿಸಿಕೊಂಡು ಕುಳಿತಿರುತ್ತಾರಂತೆ ಇವರು. common sense ಇಲ್ವಾ ಇವ್ರಿಗೆ ಹೀಗೆ ದುಡ್ಡು/ಜಾಗವನ್ನು ಪೋಲು ಮಾಡೋಕ್ಕೆ.
ಅಷ್ಟಕ್ಕೂ ಫಲಪುಷ್ಪ ಪ್ರದರ್ಶನ ಎಂಬೋದೆ ಸರಿಯಿಲ್ಲಾ. ಅವರು ಮಾಡೋದು ಹೂಕುಂಡಗಳಲ್ಲಿ ಬೆಳೆಸಿದ ಗಿಡಗಳನ್ನು ಇಲ್ಲಿ ತಂದಿಟ್ಟು ಜನಕ್ಕೆ ತೋರಿಸ್ತಾರೆ. ಎಲ್ಲೋ ಬೆಳೆದಿರುವುದನ್ನು ಹೂಕುಂಡಗಳಲ್ಲಿ ತಂದಿಡುವುದಕ್ಕೆ ಇದೇ ಜಾಗ ಬೇಕಾ? ಅತ್ಲಾಗೆ ಬೇರೆ ಯಾವುದಾದರೂ ಫೀಲ್ಡಿನಲ್ಲಾದ್ರೂ ಅಂತಹ ಪ್ರದರ್ಶನ ಆಯೋಜಿಸಲಿ.
ಅಲ್ಲಿಗೆ ಲಾಲ್ ಬಾಗ್ ಗೆ ಲಕ್ಷಾಂತರ ಮಂದಿ ದಾಳಿಯಿಡುವುದೂ ತಪ್ಪುತ್ತದೆ. ಈ ಪಾರ್ಕಿಂಗ್ ಲಾಟ್ ನಿರ್ಮಾಣದ ರಗಳೆಯೂ ಇರೋಲ್ಲ. ತಕ್ಷಣ ಇನ್ನಾದರೂ ಈ ನಿರ್ಮಾಣ ಕಾರ್ಯವನ್ನು ಸರಕಾರ ನಿಲ್ಲಿಸಲಿ ಎಂದು ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ಆಗ್ರಹಿಸಿದ್ದಾರೆ. ಸರಕಾರ ಕೇಳಿಸಿಕೊಳ್ಳುತ್ತಿದೆಯಾ !?












Click it and Unblock the Notifications