ಆಭರಣ ಲೂಟಿ; ಕನ್ನಡ ಕಿರುತೆರೆ ನಟ ಬಂಧನ

ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಗೆ ವಿಷ ಮಿಶ್ರಿತ ಕೇಕ್ ನೀಡಿ ಪ್ರಜ್ಞೆ ತಪ್ಪಿಸಿ, ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಕಿರುತೆರೆ ನಟ ಶಶಿಧರ ಯಾನೆ ನಾರಾಯಣ ಪರಾರಿಯಾಗಿದ್ದ. ಬೆಳ್ತಂಗಡಿ ತಾಲೂಕಿನ ಕಳಂಜದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಳು.
ಆರೋಪ ಎದುರಿಸುತ್ತಿದ್ದರೂ ನ್ಯಾಯಾಲಯದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗುತ್ತಿದ್ದ ಶಶಿಧರನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪಂಚರಂಗಿ ಪೋಂ ಪೋಂ, ಮನೆಯೊಂದು ಮೂರು ಬಾಗಿಲು, ರಂಗೋಲಿ ಮುಂತಾದ ಧಾರಾವಾಹಿಗಳಲ್ಲಿ 28 ವರ್ಷದ ಶಶಿ ಅಭಿನಯಿಸಿದ್ದಾನೆ.
ಘಟನೆ ಹಿನ್ನೆಲೆ: ಕಳಂಜಗ್ರಾಮ ಮಾವಿನಡಿ ಮನೆ ನಿವಾಸಿ ಲಿಂಗಪ್ಪ ಗೌಡರ ಪುತ್ರಿ ಹೇಮಾವತಿ (23) ಎಂಬ ಯುವತಿ ಮೋಸಕ್ಕೀಡಾದಳು. ಆಕೆ ಮನೆಯಲ್ಲಿ ಒಂಟಿಯಾಗಿರುವ ಸಮಯ ನೋಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ನಿವಾಸಿ ಶಶಿ, ಮಹಿಳೆಗೆ ಪ್ರಜ್ಞೆ ತಪ್ಪಿಸುವ ಕೇಕ್ ನೀಡಿ ಮನೆಯಲ್ಲಿದ್ದ ಹತ್ತು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ಹಾಡು-ಹಗಲೇ ದೋಚಿ ಪರಾರಿಯಾಗಿದ್ದ.
ವಿಷಯುಕ್ತ ಕೇಕ್ ತಿಂದ ಹೇಮಾವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ ಆಕೆಯ ಮೈಮೇಲಿದ್ದ ಒಡವೆಗಳನ್ನು ಕಳಚಿದ್ದಾನೆ. ಶಶಿ ಮಾಡುತ್ತಿರುವ ದುಷ್ಕೃತ್ಯದ ಅರಿವು ಉಂಟಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಹೇಮಾ, ನಂತರ ವಾಂತಿ ಮಾಡಿಕೊಂಡು ಬೊಬ್ಬೆ ಹಾಕತೊಡಗಿದಾಗ, ನೆರೆಮನೆಯವರು ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಉಪ್ಪಿನಂಗಡಿ ಪೊಲೀಸರು ಈ ಕಳವು ಪ್ರಕರಣದ ತನಿಖೆ ಮಾಡಿ ಶಶಿಯನ್ನು ಒಮ್ಮೆ ಬಂಧಿಸಿದ್ದರು.
ಜಾಮೀನ ಮೇಲೆ ಬಿಡುಗಡೆ ಹೊಂದಿದ್ದ ಶಶಿ ಧಾರಾವಾಹಿಗಳಲ್ಲಿ ತೊಡಗಿಕೊಂಡಿದ್ದ. ನಂತರ ವಿಚಾರಣೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ವಾರೆಂಟ್ ಹೊರಡಿಸಿದ್ದರೂ ಶಶಿ ಕ್ಯಾರೆ ಎನ್ನಲಿಲ್ಲ. ಕೋರ್ಟ್ ಆದೇಶ ಪಾಲಿಸದ ಕಾರಣಕ್ಕೆ ಶಶಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.












Click it and Unblock the Notifications