ಅಧಿಕಾರ ಪೀಠ : ದಲಿತರ ಒಡಕಿಗೆ ಕಾರಣವಾದ ವರದಿ

ನ್ಯಾಯಮೂರ್ತಿ ಸದಾಶಿವ ಆಯೋಗ ತನ್ನ ವರದಿಯಲ್ಲಿ 96 ಲಕ್ಷ ಪರಿಶಿಷ್ಟರಲ್ಲಿ ಶೇ 33.74 ಎಡಗೈನವರು, ಶೇ 32ರಷ್ಟು ಬಲಗೈನವರು ಶೇ 23.64 ಸ್ಪರ್ಶಜಾತಿಗಳಾಗಿ ಶೇ 4.64 ಇತರ ಪರಿಶಿಷ್ಟ ಜಾತಿಯವರು ಎನ್ನುವ ಅಂಕಿ-ಅಂಶ ನೀಡಿದೆ.
ಮೀಸಲಾತಿಯ ಮರುವರ್ಗಿಕರಣಕ್ಕೆ ಶಿಫಾರಸು ಮಾಡಿದ್ದು ಇದು ದಲಿತರಲ್ಲಿಯೆ ಒಡಕಿಗೆ ಕಾರಣವಾಗಿದೆ. ರಾಜ್ಯದಲ್ಲಿನ ಒಟ್ಟು 101 ಜಾತಿಗಳ ದಲಿತ ಸಮುದಾಯವನ್ನು ನಾಲ್ಕು ವರ್ಗಗಳಾಗಿ ವಿಭಜಿಸಿ ಶೇ 15ರಷ್ಟಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೆ ತರುವಂತೆ ಶಿಫಾರಸು ಮಾಡಿದೆ.
ಇದರಲ್ಲಿ ಎಡಗೈಗೆ ಶೇ 6, ಬಲಗೈಗೆ ಶೇ 5, ಸ್ಪರ್ಶರಿಗೆ ಶೇ 3 ಹಾಗೂ ಇತರರಿಗೆ ಶೇ 1 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ.
ವರದಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕಾದರೆ ವರದಿಯನ್ನು ಆಧಾರಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರ್ಗಿಕರಣದ ಅನುಮೋದನೆಗಾಗಿ ಕಳಿಸಿಕೊಡಬೇಕಾಗುತ್ತೆ.
ಅನಂತರ ಇದನ್ನು ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ತರಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ರಾಜ್ಯ ಸರ್ಕಾರ ಮಾತ್ರವಲ್ಲ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಮೌನವಾಗಿವೆ. ಇದಕ್ಕೆ ಕಾರಣ ಯಾವುದೇ ಪಕ್ಷ ಕೂಡ ಅದು ಚುನಾವಣೆ ಹತ್ತಿರದಲ್ಲಿರುವ ಈ ಸಮಯದಲ್ಲಿ ಹೊಸದಾಗಿ ಯಾವುದೇ ವಿವಾದವನ್ನು ತಲೆಮೇಲೆ ಎಳೆದುಕೊಳ್ಳಲು ಇಚ್ಛಿಸುವುದಿಲ್ಲ.
ಈಗ ಆಯೋಗದ ಶಿಫಾರಿಸಿಗೆ ಒಪ್ಪಿದರೆ ದಲಿತರ ಮಧ್ಯೆ ಮತ್ತೊಂದು ವರ್ಗ ಸಂಘರ್ಷ ನಡೆಯುವ ಅವಕಾಶ ಕೂಡ ಇದೆ. ಹಾಗಂತ ಇದನ್ನು ತಿರಸ್ಕರಿಸಿದರೆ ವಿಶೇಷವಾಗಿ ಮಾದಿಗ ದಂಡೋರ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತದೆ. ಏಕೆಂದರೆ ಕಳೆದ ಎರಡು ದಶಕದಿಂದ ಪಕ್ಕದ ಆಂಧ್ರ ಸೇರಿದಂತೆ ಅನೇಕ ಭಾಗಗಳಲ್ಲಿ ಒಳ ಮೀಸಲಾತಿಗಾಗಿ ಮಾದಿಗ ದಂಡೋರ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದೆ.
ಇಂಥ ಪರಸ್ಥಿತಿಯಲ್ಲಿ ಅದು ಈ ವರದಿಯ ಆಧಾರದ ಮೇಲೆ ಒಳಮೀಸಲಾತಿಗಾಗಿ ಹೋರಾಟ ಶುರು ಮಾಡಿದೆ. ಅದು ಮತ್ತಷ್ಟು ಕಾವು ಪಡೆದುಕೊಳ್ಳುವ ಅವಕಾಶಗಳು ಸಹ ಇದೆ. ಇನ್ನೊಂದಡೆ ಕೇವಲ ಶೇ 3ರಷ್ಟು ಮೀಸಲಾತಿಯನ್ನು ಬೋವಿ, ಲಂಬಾಣಿ, ಕೊರಮ, ಕೊರಚ ಮುಂತಾದ ಸುಮಾರು 97 ಜಾತಿಗಳಿಗೆ ನೀಡುವಂತೆ ಶಿಫಾರಸು ಮಾಡಿರುವುದು ಈ ಸಮುದಾಯಗಳನ್ನು ಕೆರಳಿಸಿದೆ. ತಕ್ಷಣ ವರದಿಯನ್ನು ತಿರಸ್ಕರಿಸಬೇಕೆಂದು ಒಕ್ಕೊರಲಿನಿಂದ ಇವರೆಲ್ಲಾ ಅಗ್ರಹಿಸುತ್ತಿದ್ದಾರೆ.
ಯಾವ ನಾಯಕರು ಕೈ ಹಿಡಿಯಲಿದ್ದಾರೆ?: ಇನ್ನು ರಾಜಕೀಯವಾಗಿ ನೋಡಿದರೆ ರಾಜ್ಯ ರಾಜಕೀಯದಲ್ಲಿ ಬಲಗೈ ಸಮುದಾಯದ ಹೆಚ್ಚಿನ ಒಲವು ಕಾಂಗ್ರೆಸ್ ಕಡೆಗಿದೆ. ಇದಕ್ಕೆ ಕಾರಣವಿಲ್ಲದೆ ಇಲ್ಲ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವಿಧಾನಸಭೆಯ ಮಾಜಿ ನಾಯಕಿ ಮೋಟಮ್ಮ, ಕೇಂದ್ರ ಸಚಿವರಾದ ಖರ್ಗೆ, ಮುನಿಯಪ್ಪ ಈಗೇ ದೊಡ್ಡಮಟ್ಟದಲ್ಲಿ ಈ ಸಮುದಾಯದ ನಾಯಕತ್ವಗಳು ಕಾಂಗ್ರೆಸ್‌ನಲ್ಲಿದೆ.
ಆದರೆ ಎಡಗೈ ಸಮುದಾಯ ಇಲ್ಲಿ ಸಂಪೂರ್ಣವಾಗಿ ಸೂರ್ಯಾಸ್ತವಾಗಿದೆ. ಅದೇ ಸಮಯದಲ್ಲಿ ಈ ಸಮುದಾಯದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ರಾಜ್ಯ ಸರ್ಕಾರದಲ್ಲಿ ಪ್ರಮುಖ ಮಂತ್ರಿಗಳಾಗಿದ್ದಾರೆ,
ಇತ್ತೀಚೆಗಷ್ಟೆ ಮತ್ತೊಬ್ಬ ನಾಯಕ ಕೆ.ಜಿ.ಶಾಣಪ್ಪನವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ ಬಿಜೆಪಿ ಈ ಸಮುದಾಯದಲ್ಲಿ ಅದು ಮತ್ತಷ್ಟು ಬಲಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ.
ಇದರ ಜೊತೆಗೆ ಮತ್ತೆರಡು ಪ್ರಮುಖ ಸಮುದಾಯಗಳಾದ ಬೋವಿ ಮತ್ತು ಲಂಬಾಣಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಬಿಜೆಪಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಈ ನಾಯಕತ್ವಗಳಿಗೂ ಬೆಲೆಯಿಲ್ಲ ಅನ್ನೋ ಭಾವನೆ ಈ ಸಮುದಾಯಗಳಲ್ಲಿ ವ್ಯಕ್ತವಾಗುತ್ತಿದೆ. ಜೆಡಿಎಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೆ ಸ್ಥಳೀಯವಾಗಿ ವ್ಯಕ್ತವಾಗುವ ಬೆಂಬಲ ಹೊರತಾಗಿ ಪ್ರತ್ಯೇಕವಾಗಿ ದಲಿತ ಸಮುದಾಯದ ಬೆಂಬಲ ಗಟ್ಟಿಯಾಗಿ ಕಾಣುತ್ತಿಲ್ಲ. ಒಂದು ಅರ್ಥದಲ್ಲಿ ಸದ್ಯ ಮಟ್ಟಿಗೆ ಬಲಗೈ ಸಮುದಾಯ ಕಾಂಗ್ರೆಸಿಗೆ ಎಡಗೈ ಮತ್ತು ಸ್ಪರ್ಶ್ಯ ದಲಿತರಲ್ಲಿ ಬಿಜೆಪಿ ಸಿಂಹಪಾಲು ಪಡೆಯುವ ಲಕ್ಷಣಗಳು ಕಾಣುತ್ತಿದೆ.












Click it and Unblock the Notifications