ಯಡಿಯೂರಪ್ಪ ಕಾಲೇಜು ಮುಂದಿನ ಮನೆ ನೆಲಸಮ

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ಗೆ ಹೊಂದಿಕೊಂಡಂಎ ಇರುವ ಪಿಇಎಸ್ ಐಟಿ ಕಾಲೇಜಿನ ಮುಂಭಾಗದಲ್ಲಿದ್ದ ಮನೆ ಭಾನುವಾರ ಬೆಳಗ್ಗೆ ನೆಲಸಮವಾಗಿದೆ.
ಪೆಸಿಟ್ ಕಾಲೇಜಿನ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತೆ ಎಂಬ ಕಾರಣಕ್ಕೆ ಮನೆಯನ್ನು ಏಕಾಏಕಿ ನೆಲಸಮಗೊಳಿಸಲಾಗಿದೆ. ಹೀಗಾಗಿ ಮನೆಯವರು ನೆರವಿಗಾಗಿ ಯಾರೊಂದಿಗೂ ಸಂಪರ್ಕ ಸಾಧಿಸಲು ಆಗಲಿಲ್ಲ. ಕಾಲೇಜು ಆಡಳಿತ ಮಂಡಳಿಯ ಜೊತೆ ಕೈ ಜೋಡಿಸಿದ ಸ್ಥಳೀಯ ಪೊಲೀಸರು ಭಾನುವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಮನೆ ಕೆಡವಲು ಆರಂಭಿಸಿದ್ದಾರೆ.
ಮೊದಲಿಗೆ ಪೆಸಿಟ್ ಕಾಲೇಜಿನ ಮುಂದಿನ ಮನೆಯಲ್ಲಿದ್ದವರ ಮೊಬೈಲ್ ಕಸಿದುಕೊಳ್ಳಲಾಗಿದೆ. ನಂತರ ಜೆಸಿಬಿ ಯಂತ್ರಗಳನ್ನು ಬಳಸಿ ಕೆಲ ಹೊತ್ತಿನಲ್ಲಿ ಮನೆ ನೆಲಕ್ಕುರಳಿಸಲಾಗಿದೆ.
ಕೋರ್ಟ್ ಆದೇಶದಂತೆ ಮಣಿಕಂಠನ್ ಎಂಬುವವರಿಗೆ ಸೇರಿದ ಈ ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಎಸಿಪಿ ವೈಶಾಲಿ ಹೇಳಿದ್ದಾರೆ.
ಕಾಲೇಜು ಮುಂಭಾಗದಲ್ಲಿ ಈ ಹಿಂದೆ ಕೂಡಾ ಹಲವು ಮನೆಗಳಿದ್ದವು, ಸೂಕ್ತ ಪರಿಹಾರ ನೀಡಿ ಎಲ್ಲಾ ಮನೆಗಳನ್ನು ತೆರವುಗೊಳಿಸಲಾಗಿದೆ. ಮಣಿಕಂಠ ಎಂಬ ವ್ಯಕ್ತಿ ಮನೆ ತೆರವುಗೊಳಿಸಲು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.
ಮನೆ ತೆರವುಗೊಳಿಸುವಂತೆ ಸ್ವತಃ ಯಡಿಯೂರಪ್ಪ ಅವರ ಮನೆಯವರು ಬಂದು ಕೇಳಿಕೊಂಡಿದ್ದರೂ ಮಣಿಕಂಠ ಜಗ್ಗಿರಲಿಲ್ಲ. ಕೋರ್ಟ್ ಆದೇಶ ಪಡೆದಿದ್ದೇವೆ ಎಂದು ಹೇಳಿ ಅಧಿಕಾರಿಗಳು ಭಾನುವಾರ ಮುಂಜಾನೆ ಮನೆ ನೆಲಸಮಗೊಳಿಸಿದ್ದಾರೆ.
ರಸ್ತೆ ಅಗಲೀಕರಣ, ಬಸ್ ಶೆಲ್ಟರ್ ನಿರ್ಮಾಣದ ಉದ್ದೇಶದಿಂದ ಮನೆ ಕೆಡವಲಾಗಿದೆ. ಅಸಲಿಗೆ ಮಣಿಕಂಠ ಎಂಬ ವ್ಯಕ್ತಿ ಈ ಮನೆಯ ಅಸಲಿ ಮಾಲೀಕನಲ್ಲ. ಅಸಲಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗಿದೆ ಎಂದು ಪ್ರೇರಣಾ ಎಜುಕೇಷನ್ ಟ್ರಸ್ಟ್ ನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಆದರೆ, ಮನೆ ನೆಲಸಮಗೊಳಿಸುವ ಬಗ್ಗೆ ಮುಂಚಿತವಾಗಿ ನೋಟಿಸ್ ನೀಡಿಲ್ಲ. ನೆಲ ಸಮಗೊಳಿಸುವ ಸಂದರ್ಭದಲ್ಲೂ ಯಾವೊಬ್ಬ ಅಧಿಕಾರಿ ಕೂಡಾ ನೋಟಿಸ್ ನೀಡಿಲ್ಲ ಎಂದು ಮಣಿಕಂಠ ಹಾಗೂ ಅವರ ಕುಟುಂಬದವರು ಗೋಳು ತೋಡಿಕೊಂಡಿದ್ದಾರೆ.
ಮನೆ ಅಸಲಿ ಮಾಲೀಕ ಯಾರು, ಅಧಿಕಾರಿಗಳು ನೋಟಿಸ್ ಏಕೆ ನೀಡಲಿಲ್ಲ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬೀಳಬೇಕಿದೆ.












Click it and Unblock the Notifications