ನಿಲಂ ಎಫೆಕ್ಟ್: ಕರ್ನಾಟಕದಲ್ಲಿ ತುಂತುರು ಮಳೆ ಶುರು

ಅ.31 ಮತ್ತು ನ.1 ಹಾಗೂ ನ.2ರಂದು ರಾಜ್ಯದ ಪೂರ್ವಭಾಗವಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ , ತುಮಕೂರು ಹಾಗೂ ಒಳನಾಡಿನ ಬೆಂಗಳೂರು ನಗರ, ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ, ಮಧ್ಯಮ ಹಾಗೂ ಕೆಲವೆಡೆ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಪುಟ್ಟಣ್ಣ ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ರಾಜ್ಯದ ಒಳನಾಡಿನಲ್ಲೂ ಮೋಡ ಕವಿದ ವಾತಾವರಣವಿತ್ತು. ವಾಯುಭಾರ ಕುಸಿತ ತೀವ್ರಗೊಂಡ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಚಂಡಮಾರುತವೆಂದು ಘೋಷಿಸಿದೆ.
ತಮಿಳುನಾಡಿನ ನಾಗಪಟ್ಟಣಂ ಮತ್ತು ಕಡಲೂರು ನಡುವೆ ಒಳನಾಡಿಗೆ ಮಳೆಯ ಮಾರುತಗಳು ಧಾವಿಸಲಿವೆ. ಮಳೆಯ ಮಾರುತಗಳು ಉತ್ತರಾಭಿಮುಖವಾಗಿ ಹಾದು ಹೋಗುವ ಸಾಧ್ಯತೆಗಳಿವೆ.
ಇದರಿಂದ ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ನೇರ ಪ್ರಭಾವ ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೇಲೆ ಉಂಟಾಗಲಿದ್ದು, ವ್ಯಾಪಕ ಹಾಗೂ ಭಾರೀ ಪ್ರಮಾಣದ ಮಳೆಯಾಗಲಿದೆ.
ಅದರ ಪರೋಕ್ಷ ಪರಿಣಾಮ ಕರ್ನಾಟಕದ ಮೇಲೆ ಉಂಟಾಗುತ್ತಿದ್ದು, ಮಧ್ಯಮ ಪ್ರಮಾಣದ ಮಳೆಯನ್ನು ನಿರೀಕ್ಷಿಸಲಾಗಿದೆ. ಆದರೆ ಚಂಡಮಾರುತದ ದಿಕ್ಕು ಮತ್ತು ವೇಗ ಯಾವ ರೀತಿ ಪರಿವರ್ತನೆಯಾಗಲಿದೆ ಎಂಬುದರ ಮೇಲೆ ರಾಜ್ಯಕ್ಕೆ ಎಷ್ಟರ ಪ್ರಮಾಣದ ಮಳೆಯಾಗುವುದು ಎಂಬುದನ್ನು ಅಂದಾಜಿಸಬಹುದಾಗಿದೆ ಎಂದರು.
ತಮಿಳುನಾಡು ತತ್ತರ: ಅಮೆರಿಕದಲ್ಲಿ ಸ್ಯಾಂಡಿ ಚಂಡಮಾರುತ ದೇಶದ ಜನತೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರೆ, ಇತ್ತ ತಮಿಳುನಾಡಿನಲ್ಲಿ ತೀವ್ರ ಪ್ರಮಾಣದ ಚಂಡಮಾರುತ ಉಂಟಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಇದರ ಪರಿಣಾಮ ಕಳೆದ ಎರಡು ದಿನಗಳಿಂದ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ.
ತಮಿಳುನಾಡಿನ ನೆಲ್ಲಪಟ್ಟಣಂ, ನೆಲ್ಲೂರು , ಚೆನ್ನೈ ಸೇರಿದಂತೆ ಎಲ್ಲೆಡೆ ಕುಂಭದ್ರೋಣ ಮಳೆಯಾಗುತ್ತಿದ್ದು, ಚಂಡಮಾರುತದ ಪ್ರಭಾವ ಆಂಧ್ರಪ್ರದೇಶದ ದಕ್ಷಿಣ ಭಾಗಕ್ಕೂ ಕಾಲಿರಿಸಲಿದೆ. ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲೂ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ ಸೇರಿದಂತೆ ಕೆಲವು ಕಡೆ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ.
ನಾಗಪಟ್ಟಣಂ, ಚೆನ್ನೈ ಮತ್ತು ಪುದುಚೇರಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಎಚ್ಚರಿಸಲಾಗಿದೆ. ಅಲ್ಲದೆ ತೀರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರಿಕರನ್ನು ತೆರವುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ಪಡೆ, ಅರೆಸೇನಾ ಪಡೆ, ಸ್ಥಳೀಯ ಪೊಲೀಸರನ್ನು ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾಗಿದೆ.











Click it and Unblock the Notifications