ಮಾಧ್ಯಮಗಳು ಭ್ರಷ್ಟಾತಿಭ್ರಷ್ಟ, ಕಾಂಗ್ರೆಸ್ ದಲ್ಲಾಳಿಯಂತೆ

ಮಾಧ್ಯಮವೊಂದರ ಭಾರಿ ಭ್ರಷ್ಟಾಚಾರವು ಅಂದೇ ತಮ್ಮ ಗಮನಕ್ಕೆ ಬಂದಿದ್ದರೂ ಮೌನಕ್ಕೆ ಜಾರಿದ ಗಡ್ಕರಿ ಈಗ ಅದರ ವಿರುದ್ಧ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ, ತಮ್ಮ ವಿರುದ್ಧ ಅದರಲ್ಲೂ ತಮ್ಮ ಭ್ರಷ್ಟಾಚಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಪ್ರಕಟಿಸುತ್ತಾ ಹೋದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಇತರೆ ಮಾಧ್ಯಮಗಳಿಗೆ ಧಮ್ಕಿ ಹಾಕಿದ್ದಾರೆ.
ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ, ಯಶಸ್ವಿ ಉದ್ಯಮಿಯಾಗಿರುವ ಬಿಜೆಪಿಯ ಗಡ್ಕರಿ ಅವರು ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಹಾದಿಯಲ್ಲೇ ಸಾಗಿದ್ದಾರೆ. ಇತ್ತೀಚೆಗೆ ತಮ್ಮ ಪೂರ್ತಿ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ/ ಕಂತು ಕಂತಿನಲ್ಲಿ ಜಗಜ್ಜಾಹೀರುಗೊಳಿಸಿದ 2 ಇಂಗ್ಲೀಷ್ ನ್ಯೂಸ್ ಚಾನೆಲ್ಲುಗಳು ಮತ್ತು 1 ಆಂಗ್ಲ ಪತ್ರಿಕೆಯ ವಿರುದ್ಧ ಮಾನನಷ್ಟ ಪ್ರಕರಣದ ಕೇಸ್ ಜಡಿಯುವುದಾಗಿ ಘೋಷಿದ್ದಾರೆ.
ಆದರೆ ಗಡ್ಕರಿ ಅವರು ಆ ಮಾಧ್ಯಮಗಳು ಯಾವುವು ಎಂಬುದನ್ನು ಸುತರಾಂ ಹೇಳಲಿಲ್ಲ. ಸುಮ್ಕೆ ಧಮ್ಕಿ ಹಾಕಿದ್ದಾರೆ. ಆದರೆ ಗಡ್ಕಿರಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಆ ಮಾಧ್ಯಮಗಳ ಮೂಲಕ ತಿಳಿದುಕೊಂಡಿರುವ ಜನಕ್ಕೆ ಆ ಮಾಧ್ಯಮಗಳು ಯಾವುವು ಎಂಬುದು ತಿಳಿದಿವೆಯಂತೆ.
'ನನ್ನ ಪೊರ್ತಿ ಗ್ರೂಪ್ ಕಂಪನಿಗಳಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಅದೆಲ್ಲ ಕಾಂಗ್ರೆಸ್ ಪಿತೂರಿ. ಈ ಮೂರು ಮಾಧ್ಯಮ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿವೆ. ಅವುಗಳ ವಿರುದ್ಧ ಸಿವಿಲ್ಲು ಮತ್ತು ಕ್ರಿಮಿನಲ್ಲು... ಹೀಗೆ ಒಟ್ಟೊಟ್ಟಿಗೆ ಎರಡೂ ಕೇಸುಗಳನ್ನು ಜಡಿಯುತ್ತೇನೆ. ನೋಡುತ್ತಿರಿ' ಎಂದಿದ್ದಾರೆ ಗಡ್ಕರಿ.
'ಈ ಮೂರೂ ಮಾಧ್ಯಮ ಸಂಸ್ಥೆಗಳ ಪೈಕಿ ಒಂದು ಸಂಸ್ಥೆಯಂತೂ... ರಾಮ ರಾಮ... ಹೇಗೆ ಹೇಳಲಿ... ಭಾರಿ ಮೊತ್ತದ ಕಪ್ಪು ಹಣವನ್ನು ಮಾರಿಷಸ್ ಮೂಲಕ ಲಂಡನ್ ಗೆ ಸಾಗಿಸಿದೆ. 10 ರೂ. ಮುಖಬೆಲೆಯ ಷೇರನ್ನು ತಲಾ 38,000 ರೂ. ನಂತೆ ಮಾರಾಟ ಮಾಡುವ ಮೂಲಕ ಕಪ್ಪು ಹಣವನ್ನು ಬಿಳಿಯಾಗಿಸಿಕೊಂಡಿದೆ' ಎಂದು ಗಡ್ಕರಿ ಆರೋಪಿಸಿದ್ದಾರೆ.
'ನೋಡಿ. ನಾನು ಬಿಜೆಪಿ ಅಧ್ಯಕ್ಷ ಆಗಬೇಕು ಎಂದು ಆಸೆಪಟ್ಟವನೂ ಅಲ್ಲ. ಆ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಒತ್ತಡ ಹಾಕುವವನೂ ಅಲ್ಲ' ಎಂದೂ ಗಡ್ಕರಿ ಅವರು ಸ್ವಯಂ ಪ್ರೇರಿತರಾಗಿ ಇದೇ ಸಂದರ್ಭದಲ್ಲಿ ಒಗ್ಗರಣೆ ಹಾಕಿದ್ದಾರೆ.












Click it and Unblock the Notifications