ಕೆಜೆಪಿಗಾಗಿ ಬಿಎಸ್‌ವೈ ಹೋಮಹವನ: ಅನಂತ ಆಟವೇನು?

ನಾಳೆ ಮಹೂರ್ತ ಫಿಕ್ಸ್: ನಾಳೆ ಮಂಗಳವಾರ ತಮ್ಮ ನೂತನ ಪಕ್ಷವಾದ ಕರ್ನಾಟಕ ಜನತಾ ಪಕ್ಷದ ಕಚೇರಿಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ತತ್ಸಂಬಂಧ ತಮ್ಮ ಡಾಲರ್ಸ್ ಕಾಲನಿಯಲ್ಲಿಯ ನಿವಾಸದಲ್ಲಿ ಹೋಮ ಹವನ ನಡೆಸಿದ್ದಾರೆ. ತಾವು ಹೊಸ ಪಕ್ಷ ಕಟ್ಟುವುದು ನಿಶ್ಚಿತ. ತಮ್ಮೀ ನಿರ್ಧಾರ ಅಚಲ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಕ್ಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅನಂತ ಆಟ ಏನು?: ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ದಂಡು ಹೈಡ್ರಾಮಾ ನಡೆಸಿರುವುದರ ಮಧ್ಯೆ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್ ಅವರ ಆಟ/ನಡೆ ಏನಾಗಿರಬಹುದು ಎಂಬ ಕುತೂಹಲ ಮೂಡಿದೆ.
ಯಡಿಯೂರಪ್ಪ ಅವರ ಕಡುವೈರಿ ಅನಂತ ಕುಮಾರ್ ಅವರ ನಡೆ ನಿಗೂಢವಾಗಿದ್ದು, ಅವರು ಯಾವ ರೀತಿಯ ಕೈಚಳಕ ತೋರುತ್ತಾರೆ ಎಂಬುದರ ಮೇಲೆ ಯಡಿಯೂರಪ್ಪನವರ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.
ನನ್ನ ಈ ಸ್ಥಿತಿಗೆ ಅನಂತ ಕುಮಾರ್ ಮತ್ತು ಕೆಎಸ್ ಈಶ್ವರಪ್ಪ ಅವರೇ ಕಾರಣ ಎಂದು ಯಡಿಯೂರಪ್ಪ ಪದೇ ಪದೆ ಹೇಳಿದ್ದಾರೆ. ಇದಕ್ಕೆ ಅನಂತ್ ಏನೂ ಪ್ರತಿಕ್ರಿಯೆ ನೀಡದಿದ್ದರೂ ಈಶ್ವರಪ್ಪ ದಿಢೀರನೆ ರಾಗ ಬದಲಿಸಿ, ಬಿಎಸ್‌ವೈ ನಾಮ ಜಪ ಮಾಡುತ್ತಿದ್ದಾರೆ.
ಈ ಮಧ್ಯೆ, ಅನಂತ್ ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಕನ್ನಡ ಭಾಷಣ ಮುಗಿಸಿಕೊಂಡು ನಿನ್ನೆ ಸಂಜೆ ನೇರವಾಗಿ ಸಕಾಲಕ್ಕೆ ದೆಹಲಿಗೆ ಬಂದಿಳಿದಿದ್ದಾರೆ. ಇಂದು ಸಿಎಂ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ ನಾಳೆ ದೆಹಲಿಗೆ ತಲುಪಲಿದ್ದಾರೆ.
ಈ ಸಮಾವೇಶ/ ಆವೇಶಗಳ ಮಧ್ಯೆ ಯಡಿಯೂರಪ್ಪ ಬಿಜೆಪಿಯಲ್ಲೇ ಇರುತ್ತಾರೋ ಇಲ್ಲವೋ ಎಂಬುದು ನಾಳೆ ಬಹುತೇಕ ನಿರ್ಧಾರವಾಗಲಿದೆ. ಸದ್ಯಕ್ಕೆ ಶಿಸ್ತಿನ ಪಕ್ಷ ಬಿಜೆಪಿಗೆ All the Best ಹೇಳೋಣ.












Click it and Unblock the Notifications