ಬುರ್ಖಾ ಬ್ರಿಗೇಡ್ ಬರುತ್ತಿದೆ ಎಚ್ಚರ, ಎಚ್ಚರಾ!

ಮೆಷಿನ್ ಗನ್, ಗ್ರೇನೆಡ್, ರಾಕೆಟ್ ಲಾಂಚರ್ಸ್, ಸ್ಟನ್ ಗನ್ ಹಿಡಿದ ಆಲ್ ಖೈದಾ ಮಹಿಳಾ ಉಗ್ರ ತಂಡ 'ಬುರ್ಖಾ ಬ್ರಿಗೇಡ್' ಚಿತ್ರಗಳು ಈಗಾಗಲೇ ಅಂತರ್ಜಾಲ ಪ್ರವೇಶಿಸಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗುಪ್ತ ಸ್ಥಳಗಳಲ್ಲಿ ಈ ವಿಶೇಷ ತಂಡಕ್ಕೆ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಹೊರಹಾಕಲಾಗಿದೆ.
ಯುದ್ಧಪೀಡಿತ ಚೆಚೆನ್ಯಾ ಕಡೆಯಿಂದ ನಿರಾಶ್ರಿತರಾಗಿ ಬಂದ ಮಹಿಳೆಯರನ್ನು ಆಘ್ಘಾನ್ ಗಡಿಯಲ್ಲೇ ತರಬೇತಿಗೊಳಿಸಲಾಗಿದೆ ಎಂದು ಬ್ರಿಟೀಷ್ ಟ್ಯಾಬ್ಲಾಯ್ಡ್ 'ದಿ ಸನ್' ವರದಿ ಮಾಡಿದೆ.
ರಷ್ಯಾದ ಕಾಕಾಸ್ ಪ್ರದೇಶದ ಉಗ್ರರೊಡನೆ ಸಂಪರ್ಕ ಹೊಂದಿರುವ ಅಲ್ ಖೈದಾ ಉಗ್ರ ಸಂಘಟನೆ ಇಸ್ಲಾಂ ಅವಾಜಿ ಅಥವಾ ವಾಯ್ಸ್ ಆಫ್ ಇಸ್ಲಾಂ ಎಂಬ ಚಿನ್ಹೆ ಹೊಂದಿದೆ ಎಂದು ಸನ್ ಹೇಳಿದೆ.
ಹಲವು ದೇಶಗಳ ಸುರಕ್ಷಿತಾ ಬೇಲಿಯನ್ನು ದಾಟಲು ಅಲ್ ಖೈದಾ ವಿವಿಧ ತಂತ್ರಗಳನ್ನು ಹೂಡುತ್ತಿದ್ದು, ಅದರಲ್ಲಿ ಬುರ್ಖಾ ಬ್ರಿಗೇಡ್ ಕೂಡಾ ಒಂದಾಗಿದೆ. ಜಾಗತಿಕ ಉಗ್ರರ ಜಾಲದಲ್ಲಿ ಮಹಿಳಾ ಉಗ್ರರ ಪಡೆ ತನ್ನದೆ ಆದ ಸ್ಥಾನವನ್ನು ಪಡೆಯುತ್ತಿದೆ.
ಇತ್ತೀಚೆಗೆ ಹಲವು ದೇಶಗಳಲ್ಲಿ ಕಂಡು ಬಂದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಗಳಲ್ಲಿ ಮಹಿಳೆಯರ ಬಳಕೆಯಾಗಿರುವ ಬಗ್ಗೆ ಪತ್ತೆಯಾಗಿದೆ. ಬುರ್ಖಾ ಧರಿಸಿರುವುದರಿಂದ ಮಹಿಳೆಯರು ಶಸ್ತ್ರಾಸ್ತ್ರ ರವಾನಿಸಲು ಸುಲಭವಾಗಿದೆ.
ಅಮೆರಿಕದಲ್ಲಿ ಕಾಲೆನ್ ಲಾ ರೋಸ್ ಅಲಿಯಾಸ್ ಜಿಹಾದ್ ಜೇನ್ ಹಾಗೂ ಜರ್ಮನಿಯ ಫಿಲಿಜ್ ಗೆಲೊವಿಕ್ಜ್ ಬಂಧನದಿಂದ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ ಎನ್ನಬಹುದು.
ಆಗಸ್ಟ್ ನಲ್ಲಿ 30 ವರ್ಷದ ರಷ್ಯಾದ ನಟಿಯೊಬ್ಬಳು ಇಸ್ಲಾಂಗೆ ಮತಾಂತರಗೊಂಡು ದಾಗೇಸ್ತಾನದ ಮುಸ್ಲಿಂ ಆಧ್ಯಾತ್ಮ ಗುರು ಶೇಖ್ ಸಯೀದ್ ಅಫಿಂದಿ ಹಾಗೂ 6 ಜನರನ್ನು ಆತ್ಮಾಹುತಿ ದಾಳಿ ಮೂಲಕ ಕೊಂದು ಸಾವನ್ನಪ್ಪಿದ್ದಳು.
ಸೆಪ್ಟೆಂಬರ್ ತಿಂಗಳಿನಲ್ಲಿ ಕಾಬೂಲ್ ವಿಮಾನನಿಲ್ದಾಣದ ಬಳಿ ನಡೆದ ಬಾಂಬ್ ಸ್ಫೋಟವನ್ನು ಇದೇ ಬುರ್ಖಾ ಬ್ರಿಗೇಡ್ ನಿರ್ವಹಿಸಿದೆ ಎಂಬ ಸುದ್ದಿ ಇದೆ. ಈ ದುರ್ಘಟನೆಯಲ್ಲಿ 12 ಜನ ಅಮಾಯಕರು ಸಾವನ್ನಪ್ಪಿದ್ದರು.
ಪರಿಸ್ಥಿತಿ ಕೈಮೀರುವ ಮೊದಲು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸನ್ ವರದಿ ಹೇಳಿದೆ.












Click it and Unblock the Notifications