ನ್ಯೂ.ಟೈಮ್ಸ್ ವರದಿಯಿಂದ ಬೆಂಗಳೂರು ಘನತೆ ಕುಗ್ಗಿಲ್ಲ

Jagadish Shettar
ಬೆಂಗಳೂರು, ಅ.29: ನಗರದಲ್ಲಿ ಕಸದ ಸಮಸ್ಯೆ ಉಲ್ಬಣಿಸುತ್ತಿದೆ ನಿಜ. ಸರ್ಕಾರ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸಿಲ್ಲ. ಗಂಭೀರವಾಗಿ ತೆಗೆದುಕೊಂಡಿದ್ದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿ ಬಂದ ತಕ್ಷಣ ಬೆಂಗಳೂರಿನ ಘನತೆ ಏನು ಕಮ್ಮಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏನೇ ಆದರೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಕಸದ ವಿಷಯ ಸಹ ವಿದೇಶಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಸಹಜ. ಆದರೆ, ಇದರಿಂದ ಅವಮಾನ ಆಗಿದೆ ಎಂಬುದು ಸರಿಯಲ್ಲ ಎಂದರು.

ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಸಮಯ ಬೇಕು, ಕಸ ವಿಲೇವಾರಿ ವೇಗ ಪಡೆದುಕೊಂಡಿದೆ. ಕಸದ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಈಗಿರುವ ಡಂಪಿಂಗ್‌ಯಾರ್ಡ್‌ಗಳ ಜೊತೆ ಬೇರೆ ಜಾಗವನ್ನು ಗುರುತಿಸಿದ್ದೇವೆ ಎಂದು ಮುಖ್ಯಮಂತ್ರಿ ಶೆಟ್ಟರ್ ಹೇಳಿದ್ದಾರೆ.

ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಆಗಿದೆ: ಆದರೆ, ಕಸದ ಸಮಸ್ಯೆಯ ಇಂಚಿಂಚು ತಿಳಿದಿರುವ ಮೇಯರ್ ವೆಂಕಟೇಶ್ ಮೂರ್ತಿ ಮಾತ್ರ ಗಾರ್ಡನ್ ಸಿಟಿ ಈಗ ಗಾರ್ಬೇಜ್ ಸಿಟಿ ಆಗಿದೆ ಎಂದು ಘೋಷಿಸಿದ್ದಾರೆ.

ಡಂಪಿಂಗ್ ಯಾರ್ಡ್ ಸಿಗುತ್ತಿಲ್ಲ. ಮಂಡೂರಿನ ಕಡೆ ಲಾರಿ ಸಾಗಿಸಲು ಸಾಧ್ಯವಿಲ್ಲ. ಕಸದ ಸಮಸ್ಯೆಗೆ ಮುಕ್ತಿ ಹಾಡಲು ಮಾವಳ್ಳಿಪುರ ಡಂಪಿಂಗ್ ಯಾರ್ಡ್ ಪುನಾರಾರಂಭಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಮೇಯರ್ ವೆಂಕಟೇಶ್ ಮೂರ್ತಿ ಹೇಳಿದ್ದಾರೆ.

ಆದರೆ, ಮಾವಳ್ಳಿಪುರ ಡಂಪಿಂಗ್ ಯಾರ್ಡ್ ನಲ್ಲಿ ಐದು ಲಕ್ಷ ಟನ್ ಕಸ ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹವಾಗಿದೆ. ಇದನ್ನು ಗೊಬ್ಬರವಾಗಿ ಪರಿವರ್ತಿಸಲು ಆಗುತ್ತಿಲ್ಲ. ಹಾಗೇ ಬಿಟ್ಟರೆ, ಹೊಸ ಕಸ ತಂದು ಸುರಿಯಲು ಆಗುವುದಿಲ್ಲ.

ಐದು ಲಕ್ಷ ಟನ್ ಕಸವನ್ನು ಸುಡಬಹುದು. ಅದರೆ, ಅಷ್ಟು ದೊಡ್ಡ ಪ್ರಮಾಣದ ಕಸ ಸುಟ್ಟರೆ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ, ಇಲ್ಲಿರುವ ಕಸ ಖಾಲಿಯಾಗದ ಹೊರತು ನಗರದಲ್ಲಿರುವ ಕಸ ತಂದು ಸುರಿಯಲು ಆಗುವುದಿಲ್ಲ. ನಿಮ್ಮಮ್ಮ ವಾರ್ಡ್ ಕಸ ವಿಲೇವಾರಿಗೆ ನೀವೇ ಜವಾಬ್ದಾರರು ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಆದೇಶ ನೀಡಿದ್ದಾರೆ.

ಡಂಪಿಂಗ್ ಯಾರ್ಡ್ ದೊರೆಯದೆ ಬಿಬಿಎಂಪಿ ಅಧಿಕಾರಿಗಳು ಕಂಗಲಾಗಿದ್ದಾರೆ. ಪೌರ ಕಾರ್ಮಿಕರು ರಾಜ್ಯೋತ್ಸವದ ರಜೆ ಸಿಗುತ್ತದೆಯೇ ಎಂದು ಕಾಯ್ದು ಕುಳಿತ್ತಿದ್ದಾರೆ. ಗುತ್ತಿಗೆ ಪಡೆದ ಕಂಪನಿ ಗುತ್ತಿಗೆ ಅವಧಿ ಅಕ್ಟೋಬರ್ 30ಕ್ಕೆ ಮುಗಿಯಲಿದೆ. ಹೊಸ ಟೆಂಡರ್ ಕರೆದು ಸರ್ಕಾರ ಹೊಸ ಗುತ್ತಿಗೆದಾರರನ್ನು ನೇಮಿಸುವ ತನಕ ಕಾಯಲೇಬೇಕು. ಮೂಗು ಮುಚ್ಚಿಕೊಂಡು ಕಸದ ಜೊತೆ ಬಾಳ್ವೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ನಗರದಲ್ಲಿ ಡೆಂಘೀ, ಮಲೇರಿಯಾ, ಹಕ್ಕಿಜ್ವರದಂತಹ ಮಾರಣಾಂತಿಕ ಕಾಯಿಲೆಗಳು ಉಲ್ಬಣಗೊಂಡಿದ್ದು, ಕಸದ ರಾಶಿಯಿಂದ ನಗರದಲ್ಲಿ ಇಲಿ, ಹೆಗ್ಗಣಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ನಗರದ ಕೆಲವು ಪ್ರದೇಶಗಳಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+