ಕಡಬ ದಂಪತಿ ಭೀಕರ ಕೊಲೆ, ಆರೋಪಿ ರಫೀಕ್ ಸೆರೆ

ಸೆಪ್ಟೆಂಬರ್ 26ರಂದು ಕಡಬದ ಮನೆಯೊಂದರ ಮುಂಭಾಗದ ಕಾರಿನಲ್ಲಿ ಥಾಮಸ್ (58)ಹಾಗೂ ಮನೆಯ ಒಳಗೆ ಮೇರಿ(45) ಎಂಬುವರುಗಳ ಮೃತದೇಹಗಳು ಪತ್ತೆಯಾಗಿತ್ತು. ಕೊಲೆ ಪ್ರಕರಣವೆಂದು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಕಡಬಕ್ಕೆ ಬಂದು ಎರಡನೇ ಹೆಂಡತಿಯೊಂದಿಗೆ ನೆಲೆಸಿದ್ದ ಥಾಮಸ್ ದಂಪತಿಗಳಿಗೆ ವಿರೋಧಿಗಗಳಾರು ಇಲ್ಲದಿರುವುದು ಪ್ರಕರಣ ಬೇಧಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಕೊಲೆ ನಡೆದ ನಂತರ ಮೃತರ ಮೈಮೇಲಿದ್ದ ಚಿನ್ನಾಭರಣ ಅಪಹರಿಸಿದ್ದರಿಂದ ಚಿನ್ನಾಭರಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂಬುದು ಖಾತ್ರಿಯಾಗಿತ್ತು.
ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ನೀಡದಂತೆ ಜಾಗ್ರತೆ ವಹಿಸಿದ್ದುದು ಪೊಲೀಸರಿಗೆ ತಲೆನೋವಾಗಿತ್ತು. ಮೃತರ ಬಳಿಯಿದ್ದ ಲಾವಾ ಮೊಬೈಲ್ ಫೋನ್, ಆರೋಪಿಗಳ ಪತ್ತೆಗೆ ನೆರವಾಗಿದ್ದು ವಿಶೇಷ. ಕೊಲೆ ಮಾಡಿದ ನಂತರ ಚಿನ್ನಾಭರಣಗಳೊಂದಿಗೆ ಲಾವಾ ಮೊಬೈಲ್‍ಯನ್ನು ಆರೋಪಿಗಳು ತೆಗೆದುಕೊಂಡು ಹೋಗಿದ್ದರು. ಮೃತ ತೋಮಸ್ ಬಳಸುತ್ತಿದ್ದ ಲಾವಾ ಮೊಬೈಲ್‍ನ imei ನಂಬರ್‍ನ ಮೂಲಕ ಆರೋಪಿಗಳ ಜಾಡು ಹಿಡಿಯಲು ಪ್ರಯತ್ನಿಸಿದ ಪೊಲೀಸರು ಕೊನೆಗೂ ಯಶಸ್ಸು ಕಂಡಿದ್ದಾರೆ.
ಆರೋಪಿ ಲಾವಾ ಸೆಲ್‍ಗೆ ಬೇರೊಂದು ಸಿಮ್ ಹಾಕಿ ಬಳಸಲು ಪ್ರಾರಂಭಿಸಿದ್ದಾನೆ. ಶನಿವಾರಸಂತೆ ಹಾಗೂ ಸೋಮವಾರಪೇಟೆ ಟವರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಪತ್ತೆ ಹಚ್ಚಿ ಆ ಫೋನ್ ಮೂಲಕ ನಡೆಯುತ್ತಿದ್ದ ಸಂಭಾಷಣೆ ಹಾಗೂ ಸಂಪರ್ಕಗಳ ವಿವರಣೆಗಳನ್ನು ಪಡೆದು ಬಕ್ರೀದ್ ಹಬ್ಬದ ದಿನದಂದೇ ಆರೋಪಿಯ ಬಂಧನಕ್ಕೆ ಸೋಮವಾರಪೇಟೆಯಲ್ಲಿ ಬಲೆ ಬೀಸಿದ್ದಾರೆ. ಸುಮಾರು 15ಮಂದಿಯಿದ್ದ ಮಂಗಳೂರು ಪೊಲೀಸರ ತಂಡ 3 ವಾಹನಗಳಲ್ಲಿ ನಗರದಲ್ಲಿ ಸಂಚರಿಸಿ ಬಸ್ ನಿಲ್ದಾಣದ ಅಂಗಡಿಯೊಂದರ ಬಳಿ ಮಹಮ್ಮದ್ ರಫೀಕ್‍ನನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ ಆತ ಬಾಯಿಬಿಡುವ ಹಾಗೆ ಕಾಣದಿದ್ದಾಗ ಆತನ ಸ್ನೇಹಿತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದ ಸಂದರ್ಭ ಕಳೆದ 20 ದಿನಗಳ ಹಿಂದೆ ಲಾವಾ ಹ್ಯಾಂಡ್ ಸೆಟ್‍ನ್ನು ಮಾರಿಸಿಕೊಡುವಂತೆ ತನ್ನ ಸ್ನೇಹಿತನೋರ್ವನಿಗೆ ನೀಡಿದ್ದು ಆತ ಅದನ್ನು ಜನತಾ ಕಾಲೋನಿಯ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಿರುವ ಬಗ್ಗೆ ಪೊಲೀಸರಿಗೆ ನೀಡಿದ ಮಾಹಿತಿ ಜೋಡಿಕೊಲೆ ಆರೋಪಿಯನ್ನು ಖಾತ್ರಿಗೊಳಿಸಿದೆ.
ನಂತರ ಆರೋಪಿ ಬಳಿ ಬಂದು ಮೊಬೈಲ್ ಬಗ್ಗೆ ಕೇಳಿದಾಗ ತನಗೇನೂ ಗೊತ್ತಿಲ್ಲ. ಕಡಬದ ಆಟದ ಮೈದಾನದ ಬಳಿ ಸಿಕ್ಕಿತ್ತೆನ್ನುವ ದ್ವಂದ್ವ ಉತ್ತರ ನೀಡಿದ್ದು ಮೊಬೈಲ್ ಖರೀದಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕರೆತಂದು ವಿಚಾರಿಸಿದಾಗ ರಫೀಕ್ ನನಗೆ 1200 ರೂ.ಗೆ ಮಾರಾಟ ಮಾಡಿದ್ದಾಗಿ ಹೇಳಿಕೆ ನೀಡಿದ್ದು ಆರೋಪಿಯ ಬಗ್ಗೆ ಮತ್ತಷ್ಟು ಅನುಮಾನ ಜಾಸ್ತಿಯಾಗುವಂತೆ ಮಾಡಿದೆ.
ಈ ನಡುವೆ ಆರೋಪಿ ನಗರದ ಆಟೋ ಚಾಲಕನೋರ್ವನೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಬಗ್ಗೆ ಮಾಹಿತಿಯಿದ್ದು ಆತನನ್ನು ಕೂಡಾ ವಿಚಾರಣೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಆರೋಪಿ ಚಿನ್ನ ಹಾಗೂ ಹಣಕ್ಕಾಗಿ ಈ ಕೃತ್ಯ ಎಸಗಿರುವದಾಗಿ ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದ್ದು, ನಗರದ ಕೆಲವು ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದಾಗಿ ಹೇಳಲಾಗಿದೆ.
ಆರೋಪಿ ರಫೀಕ್ ಸೋಮವಾರಪೇಟೆ ಸುತ್ತಮುತ್ತ ಪೈಂಟರ್ ಕೆಲಸ ಮಾಡುತ್ತಿದ್ದು, ಕಡಬದ ಯುವತಿಯೋರ್ವಳನ್ನು ವಿವಾಹವಾಗಿದ್ದು ಈತನ ಮಾವನಿಂದ ಪರಿಚಯವಿದ್ದ ಕೇರಳದ ಥಾಮಸ್ ಕಳೆದ 1ವರ್ಷದ ಹಿಂದೆ ಆಸ್ತಿ ಖರೀದಿಗಾಗಿ ಸೋಮವಾರಪೇಟೆಗೆ ಆಗಮಿಸಿ ಆರೋಪಿಯ ಮನೆಯಲ್ಲಿಯೇ ತಂಗಿದ್ದು, ಆತ್ಮೀಯತೆ ಮುಂದುವರಿದಿತ್ತು ಎನ್ನಲಾಗಿದೆ.
ಸೋಮವಾರಪೇಟೆ ಸುತ್ತಮುತ್ತ ಕೆಲವೆಡೆ ಆಸ್ತಿಯನ್ನು ನೋಡಿದ ನಂತರ ಸಿಗದಿದ್ದಾಗ, ಕಡಬದಲ್ಲಿ ಥಾಮಸ್ ಆಸ್ತಿ ಖರೀದಿಸಿದ್ದರು ಎನ್ನಲಾಗಿದೆ. ಸೆಪ್ಟಂಬರ್ 25ರಂದು ಕೊಲೆ ಮಾಡಿ 26ರಂದು ಸೋಮವಾರಪೇಟೆಗೆ ಆರೋಪಿ ರಫೀಕ್ ಬಂದಿದ್ದಾನೆ. ಸೆ.27ರಂದು ಮತ್ತೊಮ್ಮೆ ಕಡಬಕ್ಕೆ ಹೋದ ಬಗ್ಗೆ ಪೊಲಿಸರು ಮಾಹಿತಿ ಪಡೆದುಕೊಂಡಿದ್ದಾರೆ.












Click it and Unblock the Notifications