ಟಿವಿ ರಿಮೋಟ್ ಗಾಗಿ ಜಗಳ ಸಾವಿನಲ್ಲಿ ಅಂತ್ಯ

ಸಾಣೆಗೊರವನಹಳ್ಳಿ 3ನೇ ಹಂತ 3ನೇ ಬ್ಲಾಕ್, 7ನೇ ಮುಖ್ಯರಸ್ತೆ ನಿವಾಸಿ ಶ್ರೀನಿವಾಸ್ (24) ಮೃತಪಟ್ಟ ದುರ್ದೈವಿ.
ಶ್ರೀನಿವಾಸ್ ಶಾಲೆಯೊಂದರಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ರೀನಿವಾಸ್ ಅಣ್ಣ ನವೀನ್ ಅವರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ 9.30 ರ ಸಮಯದಲ್ಲಿ ಶ್ರೀನಿವಾಸ್, ನವೀನ್ ಹಾಗೂ ಬಾಲರಾಜು ಎಂಬುವರು ತಮ್ಮ ತಾಯಿಯೊಂದಿಗೆ ಟಿವಿ ವೀಕ್ಷಿಸುತ್ತ ಕುಳಿತಿದ್ದರು.
ಈ ಸಂದರ್ಭದಲ್ಲಿ ಅಣ್ಣ ನವೀನ್ ಮತ್ತು ತಮ್ಮ ಶ್ರೀನಿವಾಸನ ನಡುವೆ ಟಿವಿ ಚಾನೆಲ್ ಬದಲಾವಣೆ ಮಾಡುವ ವಿಚಾರದಲ್ಲಿ ಜಗಳವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಒಳಗೆ ಎದ್ದು ಹೋದ ನವೀನ್, ಚಾಕುವಿನೊಂದಿಗೆ ಬಂದು ಶ್ರೀನಿವಾಸ್ ರನ್ನು ಹೆದರಿಸಿದ್ದಾರೆ.
ಶ್ರೀನಿವಾಸ್ ತಪ್ಪಿಸಿಕೊಳ್ಳಲು ಯತ್ನಿಸಿ ಮನೆಯಿಂದ ಹೊರ ಹೋಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನವೀನ್ ಬೀಸಿದ ಚಾಕು ಶ್ರೀನಿವಾಸ್ ತೊಡೆಗೆ ಭಾರಿ ಗಾಯ ಮಾಡಿದೆ. ನೋವಿನಿಂದ ಮನೆಯಿಂದ ಹೊರಬಿದ್ದ ಶ್ರೀನಿವಾಸ್ ಆಯತಪ್ಪಿ ಮೊದಲನೆ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಬಾಲರಾಜು ಹಾಗೂ ನವೀನ್ ಸ್ಥಳಕ್ಕೆ ಆಗಮಿಸಿ ಶ್ರೀನಿವಾಸ್ ರನ್ನು ಸಮೀಪದ ಖಾಸಗಿ ಆಸ್ಪತೆಗೆ ಸೇರಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ರಕ್ತಸ್ರಾವ ಅಧಿಕವಾಗಿ ಶ್ರೀನಿವಾಸ್ ಅವರು ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನೂ ಬರಬೇಕಿದೆ. ಆಯುಧಪೂಜೆ ದಿನ ನವೀನ್ ಅವರ ಕುಟುಂಬ ಸಾವಿನ ಸೂತಕದಲ್ಲಿ ತುಂಬಿದೆ. ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂದು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಟಿವಿ ರಿಮೋಟ್ ಗಾಗಿ ನಡೆದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಿಬ್ಬರು ಐಪಿಎಲ್ ಪಂದ್ಯವಾಳಿ ನೋಡಲು ಕಿತ್ತಾಟ ನಡೆಸಿದ್ದಾರೆ. ರಿಚರ್ಡ್ ಎಂಬ ವಿದ್ಯಾರ್ಥಿಯನ್ನು ಆತನ ಹಾಸ್ಟೆಲ್ ಮೇಟ್ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.












Click it and Unblock the Notifications