ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವರ ಸ್ಥಾನ ತುಂಬೋರು ಯಾರು?

By Prasad
|
Google Oneindia Kannada News

ಅದ್ಭುತ ಸಂಘಟನಾ ಚಾತುರ್ಯ ಹೊಂದಿರುವ ಮಾಜಿ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು, ತಾವೇ ಸ್ವತಃ ಗೊಬ್ಬರ ನೀರು ಹಾಕಿ ಬೆಳೆಸಿದ ಭಾರತೀಯ ಜನತಾ ಪಕ್ಷವನ್ನು ತೊರೆದು ಹೋಗಲು 'ಅಂತಿಮ' ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರಕ್ಕೂ ಅವರೇ ಹೊಣೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.

ಕೋಡಿಮಠ ಶ್ರೀಗಳ ಹೇಳಿದಂತೆ ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಯಡಿಯೂರಪ್ಪ ಹೊಸಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದರೆ, ಬಿಜೆಪಿ ನಾಯಕರು ಅವರಿಲ್ಲದೆ ಮುಂದಿನ ಚುನಾವಣೆ ಎದುರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್ ಯಡಿಯೂರಪ್ಪನವರನ್ನು ಸೆಳೆಯಲು ಯತ್ನಿಸುತ್ತಿದ್ದರೆ, ಜೆಡಿಎಸ್ ಇತರ ಪಕ್ಷಗಳನ್ನು ತೆಗಳುವಲ್ಲಿ ಕಾಲಹರಣ ಮಾಡುತ್ತಿದೆ.

ಕರ್ನಾಟಕದಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರೇ ಕಾರಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸತ್ಯ ಸಂಗತಿಯೆಂದರೆ, ಆ ತಾಕತ್ತು, ಆ ದರ್ಪ, ಆ ಹುಮ್ಮಸ್ಸು, ಆ ಅಹಂಕಾರ ಇರುವುದು ಅವರೊಬ್ಬರೇ ಮಾತ್ರ. ಅವರೊಬ್ಬ ಮಾಸ್ ಲೀಡರ್. ಅವರ ನೇತೃತ್ವದಲ್ಲಿ ಅನೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಾಗೆಯೆ, ಅವರ ಗೈರಿನಲ್ಲಿ ಚುನಾವಣೆಯಲ್ಲಿ ಮಣ್ಣು ಕೂಡ ಮುಕ್ಕಿದೆ.

ಯಡಿಯೂರಪ್ಪ ಬೇಕಿದ್ರೆ ಬಿಟ್ಟು ಹೋಗಲಿ, ಅವರಿಲ್ಲದಿದ್ದರೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ನಮಗೆ ಕಷ್ಟವೇನೂ ಆಗುವುದಿಲ್ಲ ಎಂದು ಬಿಜೆಪಿಯ ನಾಯಕರನೇಕರು ಸಾರಿಸಾರಿ ಹೇಳುತ್ತಿದ್ದಾರೆ. ಏಕ ವ್ಯಕ್ತಿಯಿಂದ ಪಕ್ಷ ನಡೆಯುವುದಿಲ್ಲ, ಸಂಘಟಿತ ಹೋರಾಟದಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಪಂಚಪಾಂಡವರ ಸೈನ್ಯವನ್ನು ಬಿಜೆಪಿ ಹೈಕಮಾಂಡ್ ಕಟ್ಟಿದೆ. ಆದರೆ, ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ, ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆಸುವವರು ಯಾರು? ಎಂಬ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಂತಿದೆ.

ಪಂಚಪಾಂಡವರಾದ ಕೆಎಸ್ ಈಶ್ವರಪ್ಪ, ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್ ಮತ್ತು ಗೋವಿಂದ ಕಾರಜೋಳ (!?) ಮತ್ತು ಈ ತಂಡದಲ್ಲಿ ಸ್ಥಾನ ಪಡೆಯದ ಸುರೇಶ್ ಕುಮಾರ್ ಅಥವಾ ನನ್ನನ್ಯಾಕೆ ಮರೆತಿದ್ದೀರಿ ಎಂದು ಹೇಳುತ್ತಿರುವ ಆರ್ ಅಶೋಕ್ ಅವರು ಯಡಿಯೂರಪ್ಪ ಬಿಟ್ಟಸ್ಥಳವನ್ನು ತುಂಬಬಲ್ಲರೆ? ಇವರಿಗೆ ಸಾಮೂಹಿಕ ನಾಯಕತ್ವದಲ್ಲಾದರೂ ಭಾಜಪವನ್ನು ಜಯಶಾಲಿಯಾಗಿಸುವ ತಾಕತ್ತು ಇದೆಯಾ? ಕಾಲವೇ ಉತ್ತರ ನೀಡಲಿದೆ. ಸದ್ಯಕ್ಕೆ ಬಿಜೆಪಿಯ ಈ ಏಳು ನಾಯಕರ ಜೆರಾಕ್ಸ್ ತೆಗೆಯೋಣ!

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಕುರುಬ ಜನಾಂಗದ ಅಧಿನಾಯಕನಾಗಿರುವ ಶಿವಮೊಗ್ಗದ ಶಾಸಕ ಕೆ.ಎಸ್. ಈಶ್ವರಪ್ಪ ಅವರು ತಾವೊಬ್ಬರೇ ಬಿಜೆಪಿಯನ್ನು ಮುನ್ನಡೆಸಬಲ್ಲೆ ಎಂದು ಯಾವ ಸಂದರ್ಭದಲ್ಲಿಯೂ ಹೇಳಿಲ್ಲ. ಹಾಗೆ ಹೇಳುವ ಆತ್ಮ ಅವರವಿಶ್ವಾಸವೂ ಅವರಲ್ಲಿಲ್ಲ. ಅಲ್ಲದೆ, ರಾಜ್ಯದ ಜನತೆ ಕೂಡ ಅವರು ಯಡಿಯೂರಪ್ಪನವರಿಗೆ ಪರ್ಯಾಯ ಎಂದು ಯಾವತ್ತೂ ಒಪ್ಪಿಕೊಂಡಿಲ್ಲ. ನಾಲ್ಕು ಬಾರಿ ಗೆದ್ದು 1999ರಲ್ಲಿ ಒಂದು ಬಾರಿ ಸೋತಿರುವ ಈಶ್ವರಪ್ಪ ಅವರ ನಾಯಕತ್ವವನ್ನು ತಳ್ಳಿಹಾಕುವಂತಿಲ್ಲ. ಯಡಿಯೂರಪ್ಪ ಪಟ್ಟದಲ್ಲಿದ್ದಾಗಲೇ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟು ಅವರ ವಿರುದ್ಧ ಪರೋಕ್ಷ ಯುದ್ಧ ಸಾರಿದಂತಹ ಯೋಧ ಈಶ್ವರಪ್ಪ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್

ಯಡಿಯೂರಪ್ಪನವರನ್ನು ಪಟ್ಟದಿಂದ ಕೆಳಗಿಳಿಸುವಲ್ಲಿ ಅನಂತ್ ಕುಮಾರ್ 'ಕೈವಾಡ' ಅಪಾರ. ದೆಹಲಿಯಲ್ಲಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿ ಸಂಸತ್ತಿನಲ್ಲಿ ಎಲ್ಲರಿಗಿಂತ ಉತ್ತಮವಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆರೆಸ್ಸೆಸ್ ಮತ್ತು ಎಬಿವಿಪಿ ಕಾರ್ಯಕರ್ತನಾಗಿ, ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ 'ರಾಜಕಾರಣಿ'ಯಾಗಿ ಸಾಕಷ್ಟು ಪಳಗಿರುವ ಅನಂತ್ ಕರ್ನಾಟಕದಲ್ಲಿ ಪ್ರಭಾವ ಬೆಳೆಸಿಕೊಂಡಿರುವುದು, ಯಡಿಯೂರಪ್ಪನವರಿಗೆ ಹೋಲಿಸಿದರೆ ಕಡಿಮೆಯೆ. ಬ್ರಾಹ್ಮಣ ಜಾತಿಯವ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಅನಂತ್ ಅವರು ಏಕಾಂಗಿಯಾಗಿ ಬಿಜೆಪಿಯನ್ನು ಮುನ್ನಡೆಸಬಲ್ಲರೆ?

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿರುವ ಜಗದೀಶ್ ಶೆಟ್ಟರ್ ಅವರು ಅದೃಷ್ಟದ ಮುಖಾಂತರವೇ ಮುಖ್ಯಮಂತ್ರಿಯಾಗಿದ್ದು ಎಂದು ಎಲ್ಲರಿಗೂ ಗೊತ್ತು. ಕರ್ನಾಟಕ ಕಂಡ ದುರಂತ ನಾಯಕ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದ್ದ ಶೆಟ್ಟರ್, ತಾವೊಬ್ಬ ವರ್ಚಸ್ವಿ ನಾಯಕ ಎಂದು ಯಾವತ್ತೂ ನಡೆದುಕೊಂಡಿಲ್ಲ. ಶುದ್ಧಹಸ್ತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, 'ರಾಜಕಾರಣ' ಮಾಡುವ ಪರಿಸ್ಥಿತಿ ಬಂದಾಗ ಮತ್ತೊಬ್ಬ ನಾಯಕನನ್ನು ಅವಲಂಬಿಸದೆ ಅವರಿಗೆ ಬೇರೆ ದಾರಿಯೇ ಇಲ್ಲ. ಸೋ, ಕಷ್ಟಕಷ್ಟ.

ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ

ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ

ಭ್ರಷ್ಟಾಚಾರದಲ್ಲಿ ಇತ್ತೀಚೆಗೆ ಅವರ ಹೆಸರೂ ಕೇಳಿಬಂದಿದ್ದರೂ, ಅವರು ನಿರಪರಾಧಿ ಎಂದು ಇನ್ನೂ ಸಾಬೀತಾಗಿಲ್ಲದ ಕಾರಣ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಕ್ಲೀನ್ ಹ್ಯಾಂಡೆಡ್ ಮತ್ತು ಯಡಿಯೂರಪ್ಪನವರಿಗೆ ಪರ್ಯಾಯ ನಾಯಕ ಎಂದು ಹೇಳಲು ಸಾಧ್ಯವಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲೂ ಅವರಿಂದ ಸಾಧ್ಯವಾಗಲಿಲ್ಲ. ಒಳ್ಳೆ ಇಮೇಜಂತೂ ಇದೆ. ಆದರೆ ಬಿಜೆಪಿಯನ್ನು ಇಡೀಯಾಗಿ ಚುನಾವಣೆಯಲ್ಲಿ ಹೇಗೆ ಮುನ್ನಡೆಸಿಯಾರು?

ಉಪ ಮುಖ್ಯಮಂತ್ರಿ ಆರ್ ಅಶೋಕ್

ಉಪ ಮುಖ್ಯಮಂತ್ರಿ ಆರ್ ಅಶೋಕ್

ಯಾವುದೇ ಬಣದ ಜೊತೆ ಗುರುತಿಸಿಕೊಳ್ಳದೆ, ಯಾರ ಜೊತೆ ಬೇಕಾದರೂ ಗುರುತಿಸಿಕೊಂಡು, ತನಗೆ ಹೊಂದುವಂತೆ ರಾಜಕೀಯ ದಾಳ ಉರುಳಿಸಬಲ್ಲ ಮಹತ್ವಾಕಾಂಕ್ಷಿ ಉಪ ಮುಖ್ಯಮಂತ್ರಿ ಆರ್ ಅಶೋಕ್. ಪದ್ಮನಾಭನಗರ ಕ್ಷೇತ್ರದ ಶಾಸಕರಾಗಿರುವ ಅಶೋಕ್ ಬೆಂಗಳೂರಿನ ಮಟ್ಟಿಗೆ ಪ್ರಭಾವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹಣ, ಹೆಸರು ಎರಡನ್ನೂ ಗಳಿಸಿದವರು. ಆದರೆ, ಬೆಂಗಳೂರು ಹೊರತುಪಡಿಸಿದರೆ ಅಶೋಕ್ ಇನ್ನಷ್ಟು ಕೆಲಸ ಮಾಡಬೇಕಾಗುತ್ತದೆ.

ಕಾನೂನು ಸಚಿವ ಸುರೇಶ್ ಕುಮಾರ್

ಕಾನೂನು ಸಚಿವ ಸುರೇಶ್ ಕುಮಾರ್

ಇವರಾರೂ ಬೇಡ, ಶುದ್ಧಹಸ್ತವಿರುವ ಪ್ರಭಾವಿ ವ್ಯಕ್ತಿಯನ್ನು ನೀವೇ ಸೂಚಿಸಿ ಎಂದು ರಾಜ್ಯದ ಜನತೆಯನ್ನು ಕೇಳಿದರೆ ಅವರು ತೋರುವುದು ರಾಜಾಜಿನಗರ ಶಾಸಕ ಎಸ್ ಸುರೇಶ್ ಕುಮಾರ್ ಅವರತ್ತ. ಸಾಮಾಜಿಕವಾಗಿ ಅವರು ಜನಾನುರಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಜಾತಿರಾಜಕಾರಣ, ಹಣದ ಪ್ರಭಾವ ಮೆಟ್ಟಿನಿಂತು ಬಿಜೆಪಿಯನ್ನು ಮುನ್ನಡೆಸಬೇಕೆಂದರೆ ಸುರೇಶ್ ಕುಮಾರ್ ಅವರಿಗೆ ಹತ್ತರಲ್ಲಿ ಎಷ್ಟು ಮಾರ್ಕ್ಸ್ ಸಿಗುತ್ತದೆ? ಈ 'ಸತ್ಯಾಂಶ'ವನ್ನು ಅವರೂ ಮನಗಂಡಿದ್ದಾರೆ.

ಕನ್ನಡ ಸಚಿವ ಗೋವಿಂದ ಕಾರಜೋಳ

ಕನ್ನಡ ಸಚಿವ ಗೋವಿಂದ ಕಾರಜೋಳ

ಹಿಂದುಳಿದ ವರ್ಗದ ನಾಯಕರೂ, ಹಿಂದುಳಿದ ಪ್ರದೇಶದಿಂದ ಬಂದವರೂ ಆಗಿರುವ ಇವರನ್ನು ಪಂಚಪಾಂಡವರ ಗುಂಪಿನಲ್ಲಿ ಅದ್ಹೇಗೆ ಸೇರಿಸಿಕೊಂಡರೋ ಆ ದೇವರೇ ಬಲ್ಲ. ಅವರು ಮುಧೋಳದ ಶಾಸಕ ಮತ್ತು ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾಗಿ ಅವರು ಗುರುತಿಸಿಕೊಂಡಿದ್ದಾರಷ್ಟೇ ಹೊರತು ಪ್ರಭಾವಿ ನಾಯಕರಾಗಿ ಅವರು ಯಾವತ್ತೂ ಬೆಳೆದೇ ಇಲ್ಲ. ಸೌಮ್ಯ ಸ್ವಭಾವದ ಗೋವಿಂದ ಅವರ ಮುಂದಾಳತ್ವದಲ್ಲಿ ಮುನ್ನುಗ್ಗಿ ಎಂದು ಹೈಕಮಾಂಡ್ ಹೇಳಿದರೆ ರಾಜ್ಯದಲ್ಲಿ ಬಿಜೆಪಿ ಗೋವಿಂದ ಗೋವಿಂದ.

English summary
With the exit of mass leader BS Yeddyurappa from BJP the Karnataka unit of BJP is in search of an alternate leader who can take the bull by its horn. Oneindia Kannada spreads six and a half options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X