ಸದಾನಂದ ಬಿಡಿಎ ಸೈಟು ಹೈಕೋರ್ಟಿನಲ್ಲಿ ಅಯ್ಯಯ್ಯೋ

ಈ ಮಧ್ಯೆ, ಸದಾನಂದ ಗೌಡ ಮತ್ತು ಅವರ ಪತ್ನಿ ಡಾಟಿ ದಂಪತಿ ಮರೆ ಮಾಚಿ ಆಸ್ತಿ ಮಾಡಿಕೊಂಡಿರುವ ಕೇಸು ಲೋಕಾಯುಕ್ತ ಕೋರ್ಟಿನಲ್ಲಿ ಇದೇ ನಾಗಲಕ್ಷ್ಮಿ ಬಾಯಿ ಅವರು ದಾಖಲಿಸಿದ್ದು, ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ.
ಇಬ್ಬರೂ ತಲಾ ಒಂದೊಂದು ಜಿ-ಕೆಟಗರಿ ನಿವೇಶನ ಗಿಟ್ಟಿಸಿ, ಅದನ್ನು ಏಕ ಮಾಡಿಕೊಂಡು ಆ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಪ್ರಕರಣ ಇದಾಗಿದೆ. ಭೂಗಳ್ಳರು ತಾವಲ್ಲ. ತಮಗೆ ಭೂವಶೀಕರಣ ವಿದ್ಯೆ ಗೊತ್ತಿಲ್ಲ ಎಂದು ಕೂತರೆ ನಿಂತರೆ ಹೇಳಿಕೆ ಕೊಡುತ್ತಿದ್ದ ಸನ್ಮಾನ್ಯ ಸದಾನಂದರು ದೀಪದ ಕೆಳಗೆ ಕತ್ತಲು ಎಂಬಂತೆ ತಮ್ಮ ಸೈಟ್ ಮೇಲೆ ಸೈಲಂಟಾಗಿ, ಅಕ್ರಮವಾಗಿ ಕಟ್ಟಡ ಎಬ್ಬಿಸಿದ್ದಾರೆ.
ಆದರೆ ಪ್ರಭಾವಿ ಡಿ.ವಿ. ಸದಾನಂದಗೌಡ ಮತ್ತು ಸಚಿವ ಡಿ.ಎನ್. ಜೀವ ರಾಜರು ತಮ್ಮ ಅಧಿಕಾರವನ್ನು ಬಳಸಿ, ಬಿಬಿಎಂಪಿಯಿಂದ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಅದನ್ನೇ ಈಗ ಮಂತ್ರದಂಡವನ್ನಾಗಿ ಮಾಡಿಕೊಂಡಿದ್ದು, ಬಿಬಿಎಂಪಿ ನಕ್ಷೆ ಮಂಜೂರು ಮಾಡಿದೆ. ಅದರಂತೆ ನಾವು ಕಟ್ಟಡ ನಿರ್ಮಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಅಕ್ರಮ/ಕಾನೂನುಬಾಹಿರ ಎಂಬುದು ಈ ಜೋಡಿಗೆ ಇದುವರೆಗೂ ಗೊತ್ತಿಲ್ಲ.
ಆದರೆ ಇದು ಅಕ್ರಮ ಎಂಬುದು ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಅವರಿಗೆ ಅಂದೇ ಗೊತ್ತಾಯಿತು. ಹಾಗಾಗಿ, ನೀವು ಪ್ರಭಾವಿಗಳಾಗಿದ್ದರೇನಂತೆ ಎಂದು ಇಬ್ಬರನ್ನೂ ಹೈಕೋರ್ಟಿಗೆ ಎಳೆದರು. ಹೈಕೋರ್ಟ್, ಸದಾನಂದ ಗೌಡ-ಜೀವ ರಾಜ್ ತಪ್ಪು ಮಾಡಿದ್ದಾರೆ. ತಕ್ಷಣ ಅವರ ಸೈಟನ್ನು ವಾಪಸ್ ಪಡೆಯಿರಿ ಎಂದು ಆಜ್ಞಾಪಿಸಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ನ್ಯಾ. ಡಿ.ವಿ. ಶೈಲೇಂದ್ರ ಕುಮಾರ್ ಮತ್ತು ನ್ಯಾ.ಎಚ್.ಎಸ್. ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠವು ಬಿಡಿಎಗೆ ಆದೇಶಿಸಿದೆ.
ಆದರೆ ನಾವು ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ 'ಮಾಡಿಸಿಕೊಂಡಿದ್ದೇವೆ'. ಹಾಗಾಗಿ ನಮ್ಮದೇನೂ ತಪ್ಪಿಲ್ಲ ಎಂಬ ಮಂತ್ರ ಜಪಿಸುತ್ತಿರುವ ಸದಾನಂದರು, ಹೈಕೋರ್ಟನ್ನು ದಾಟಿಕೊಂಡು ಸುಪ್ರೀಂಕೋರ್ಟಿಗೆ ಹೋಗುವ ತಯಾರಿ ನಡೆಸಿದ್ದಾರೆ. ಅಲ್ಲೂ ಸುಪ್ರೀಂಕೋರ್ಟ್ ನಮಗೆ ಛೀಮಾರಿ ಹಾಕಿದರೆ ಆಗ ನಾವು ಸೈಟು ವಾಪಸ್ ಕೊಡುತ್ತೇವೆ ಅದುವರೆಗೂ ಎಲ್ರೂ ಸುಮ್ನಿರಿ ಎಂದು ಗದರಿ ಕೊಂಡಿದ್ದಾರೆ. ಆಲ್ ದಿ ಬೆಸ್ಟ್ ಸದಾನಂದ ಗೌಡ್ರೇ!
ಮುಂದೇನಾಗಬಹುದು?
ಬಿಡಿಎ ನಿವೇಶನ ಹಂಚಿಕೆ ಒಪ್ಪಂದ ಹಾಗೂ ಗುತ್ತಿಗೆ ಷರತ್ತು 4ರ ಪ್ರಕಾರ ಹಂಚಿಕೆ ಸ್ವತ್ವನ್ನು ವಿಭಜಿಸುವಂತಿಲ್ಲ. ವಾಸಕ್ಕೆ ಮಾತ್ರ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಪ್ರಮುಖವಾಗಿ ಮೂರು ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ.
ಅವು: 1- ನಿವೇಶನ ಮಂಜೂರಾತಿ ರದ್ದುಪಡಿಸಿ, ಕಟ್ಟಡ ನೆಲಸಮಗೊಳಿಸಬಹುದು. 2- ನಿವೇಶನ ಸಮೇತ ಕಟ್ಟಡ ವಶಪಡಿಸಿಕೊಂಡು ಯಾವುದೇ ಪರಿಹಾರ ನೀಡದಿರಬಹುದು. 3- ದುಪ್ಪಟ್ಟು ದಂಡ ವಿಧಿಸಿ ಕಟ್ಟಡ ಮರಳಿಸಬಹುದು.
ಏನಿದು ಪ್ರಕರಣ?
ಜಿ-ಕೆಟಗರಿ (ಮುಖ್ಯಮಂತ್ರಿ ವಿವೇಚನಾ) ಕೋಟಾದಡಿ ನಗರದ ಎಚ್‌ಎಸ್‌ಆರ್ ಲೇಔಟ್ ಮೂರನೆ ಹಂತದ ಯಲ್ಲಗುಂಟೆಯಲ್ಲಿ 50-80 ಅಡಿ ವಿಸ್ತೀರ್ಣದ ಜಿ ಕೆಟಗರಿ ನಿವೇಶನವನ್ನು 2007ರ ಫೆ.2ರಂದು ಸದಾನಂದ ಗೌಡರಿಗೆ ಬಿಡಿಎ ಮಂಜೂರು ಮಾಡಿತ್ತು. ಈ ನಿವೇಶನದ ಪಕ್ಕದಲ್ಲಿಯೇ ಸಚಿವ ಜೀವರಾಜ್ ಅವರಿಗೂ ನಿವೇಶನ ಮಂಜೂರು ಮಾಡಿತ್ತು.
ಆದರೆ, ಸದಾನಂದ ಗೌಡರು ನಿಯಮ ಉಲ್ಲಂಘಿಸಿ, ತಮ್ಮ ಹಾಗೂ ಜೀವರಾಜ್‌ರ ನಿವೇಶನವನ್ನು ಒಂದು ಮಾಡಿ ಐದು ಮಹಡಿಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡದ ಮೊದಲನೆ ಎರಡು ಮಹಡಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದು, ಮೂರು ಮತ್ತು ನಾಲ್ಕನೆ ಮಹಡಿಗಳು ನಿರ್ಮಾಣ ಹಂತದಲ್ಲಿದೆ ಎಂದು ಆರೋಪಿಸಿ ಪತ್ರಕರ್ತೆ ಕೆ.ಜಿ. ನಾಗಲಕ್ಷ್ಮಿ ಬಾಯಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications