ಕಿಲಾಡಿ ಪೈಲಟ್, ಏರ್ ಇಂಡಿಯಾ ಹೈಜಾಕ್ ಡ್ರಾಮಾ

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ನಿಂತ ವಿಮಾನ ಸುಮಾರು 3 ಗಂಟೆಯಾದರೂ ಟೇಕಾಫ್ ಆಗದಿದ್ದಾಗ, ಪ್ರಯಾಣಿಕರು ರೊಚ್ಚಿಗೆದ್ದು ಕಾಕ್ ಪೀಟ್ ನತ್ತ ನುಗ್ಗಲು ಯತ್ನಿಸಿದರು.
ಈ ಸಂದರ್ಭದಲ್ಲಿ ಜಾಣ ಪೈಲಟ್ 'ವಿಮಾನ ಹೈಜಾಕ್ ಆಗಿದೆ' ಎಂದು ಸುಳ್ಳು ಸುದ್ದಿ ಹಬ್ಬಿಸಿ ಕೆಲ ಕಾಲ ಆತಂಕ ಮೂಡಿಸಿಬಿಟ್ಟರು. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರೆದು ಪರಿಹಾರ ಕಾರ್ಯಕ್ಕೆ ಮುಂದಾದರು.
ಕೊನೆಗೆ ಕಾಕ್ ಪಿಟ್ ನತ್ತ ನುಗ್ಗಲು ಯತ್ನಿಸಿದ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಯಿತು. ಏರ್ ಇಂಡಿಯಾ ಪೈಲಟ್ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಕೂಡಾ ಎನ್ನಲಾಗಿದೆ.
ಗೊಂದಲಕ್ಕೆ ಕಾರಣವೇನು?: ಕೊಚ್ಚಿ ಕಡೆಗೆ ತೆರಳಬೇಕಿದ್ದ ವಿಮಾನ ತಿರುವನಂತಪುರಂಗೆ ಬಂದಿಳಿಯಿತು. ಏರ್ ಇಂಡಿಯಾ ಎಕ್ಸ್ ಪ್ರೆಸ್ ಫ್ಲೈಟ್ 4422 ಅಬುದಾಬಿಯಿಂದ ಕಳೆದ ರಾತ್ರಿ 9.15 ಕ್ಕೆ ಬಂದಿಳಿಯಬೇಕಿತ್ತು. ಮೂರು ಗಂಟೆ ತಡವಾಗಿದ್ದಲ್ಲದೆ ಕೊಚ್ಚಿ ಬದಲಿಗೆ ತಿರುವನಂತಪುರಂಗೆ ಬಂದು ತಲುಪಿತ್ತು.
ಶುಕ್ರವಾರ ಮುಂಜಾನೆ 3.30 ರ ಸುಮಾರಿಗೆ ಕೊಚ್ಚಿಯಲ್ಲಿರಬೇಕಿದ್ದ ವಿಮಾನ ತಿರುವನಂತಪುರಂನಲ್ಲಿರುವುದನ್ನು ಕಂಡು ಪ್ರಯಾಣಿಕರು ಕಂಗಾಲಾಗಿದ್ದಾರೆ. ಪ್ರಯಾಣಿಕರಿಗೆ ತಾವಿರುವ ವಿಮಾನ ನಿಲ್ದಾಣದ ವಿವರ ಸರಿಯಾಗಿ ತಿಳಿಯುವ ಹೊತ್ತಿಗೆ ಗಂಟೆ 7 ಆಗಿದೆ. ಹವಾಮಾನ ವೈಪರೀತ್ಯದಿಂದ ತಿರುವನಂತಪುರಂ ಕಡೆಗೆ ತಿರುಗಿಸಿದೆ ಎಂದು ಪೈಲಟ್ ಸಮಜಾಯಿಸಿ ನೀಡಿದ್ದಾನೆ.
ಅದರೆ, ರೊಚ್ಚಿಗೆದ್ದ ಕೆಲ ಪ್ರಯಾಣಿಕರು ಕಾಕ್ ಪೀಟ್ ನತ್ತ ಧಾವಿಸಿ ಪೈಲಟ್ ಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ತಿರುವನಂತಪುರಂ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಅಧಿಕವಾಗಿದ್ದು, ಅವಕಾಶ ಸಿಕ್ಕಾಗ, ಹವಾಮಾನ ಸರಿ ಇದ್ದಾಗ ಕೊಚ್ಚಿ ಕಡೆಗೆ ಹೋಗಲಾಗುವುದು.
ಕಾಯಲು ಸಾಧ್ಯವಿಲ್ಲದ ಪ್ರಯಾಣಿಕರು ಕೊಚ್ಚಿ ಈಗಲೇ ತಲುಪಲು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಪೈಲಟ್ ಗಳು ಹೇಳಿದ್ದಾರೆ. ಆದರೆ, ಪ್ರಯಾಣಿಕರು ಈ ಆಫರ್ ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ಪೈಲಟ್ ಒಬ್ಬರು ವಿಮಾನ ಹೈಜಾಕ್ ಆಗಿದೆ ಎಂದು ಸಂದೇಶ ಹೊರಡಿಸಿ ಆತಂಕ ಸೃಷ್ಟಿಸಿದ್ದಾರೆ.












Click it and Unblock the Notifications