ಅಜಂತಾ ಗಡಿಯಾರ ನಿಂತಿದೆ, ಎರಡು ನಿಮಿಷ ಮೌನ

ಜಗತ್ತಿನ ಅತಿ ದೊಡ್ಡ ಗೋಡೆ ಗಡಿಯಾರ ನಿರ್ಮಾಣ ಕಂಪನಿ ಅಜಂತಾ ಗ್ರೂಪ್‌ನ ಸಂಸ್ಥಾಪಕ ಓಧವಜಿ ರಾಘವಜಿ ಪಟೇಲ್ (87) ಅವರು ಮೋರ್ಬಿಯಲ್ಲಿ ಕಾಲವಶವಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಗುಜರಾತ್‌ನ ಸೌರಾಷ್ಟ್ರದ ತಮ್ಮ ನಿವಾಸದಲ್ಲಿ ಕಳೆದೆರಡು ತಿಂಗಳುಗಳಿಂದ ಕೃತಕ ಉಸಿರಾಟದ ಸಾಧನ ಅಳವಡಿಸಲಾಗಿತ್ತು.
ಭಾರತದ ಗೋಡೆ ಗಡಿಯಾರದ ಜನಕ ಎಂದೇ ಖ್ಯಾತರಾಗಿದ್ದ ಓಧವಜಿ ಪಟೇಲ್ ಅವರು ಭಾರತದಲ್ಲಿ ಮಾತ್ರವಲ್ಲ ಸುಮಾರು 45 ರಾಷ್ಟ್ರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಅಜಂತಾ, ಆರ್ಪಟ್ ಮತ್ತು ಒರೆವಾ ಬ್ರಾಂಡ್ ಇರುವ ಗೋಡೆಗಡಿಯಾರ, ಸ್ವಿಚ್, ಟೈಲ್ಸ್, ಎಲೆಕ್ಟ್ರಿಕ್ ಬೈಕ್, ಟ್ಯೂಬ್ಲೈಟ್, ದೂರವಾಣಿ, ಕ್ಯಾಲ್ಕ್ಯುಲೇಟರ್ ಮುಂತಾದ ಉತ್ಪನ್ನಗಳು ವಿಶ್ವದಾದ್ಯಂತ ಮಾರಾಟವಾಗುತ್ತಿವೆ.
ಇಂಥ ಬೃಹತ್ ಉದ್ಯಮ ಸ್ಥಾಪಿಸಿದ್ದರೂ ಪಟೇಲ್ ಅವರು ತಮ್ಮನ್ನು 'ಉದ್ಯಮಿ ಎಂದು ಕರೆಯಬೇಡಿ, ಮೇಷ್ಟ್ರೇ ಎಂದೇ ಕರೆಯಿರಿ' ಎಂದು ವಿನಮ್ರವಾಗಿ ಹೇಳುತ್ತಿದ್ದರು. ಅವರು ಎಷ್ಟೇ ಎತ್ತರಕ್ಕೆ ಏರಿದ್ದರೂ, ತಮ್ಮ ಮೂಲ ವೃತ್ತಿಯನ್ನು ಮಾತ್ರ ಮರೆತಿರಲಿಲ್ಲ. ಇಂಥ ವ್ಯಕ್ತಿತ್ವವೇ ಅವರನ್ನು ಮತ್ತಷ್ಟು ಮೇಲಕ್ಕೆ ಏರುವಂತೆ ಮಾಡುತ್ತಿತ್ತು.
ವೃತ್ತಿಯಿಂದ ಮೊರ್ಬಿಯ ವಿ.ಸಿ. ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಗಣಿತವನ್ನು ಕಲಿಸುತ್ತಿದ್ದ ಪಟೇಲ್ ಅವರಿಗೆ ತಿಂಗಳಿಗೆ ಬರುತ್ತಿದ್ದ 55 ರು.ನಿಂದ 4 ಗಂಡು ಮಕ್ಕಳು, 2 ಹೆಣ್ಣು ಮಕ್ಕಳಿದ ಬೃಹತ್ ಸಂಸಾರವನ್ನು ಮುನ್ನಡೆಸುವುದು ದುಸ್ತರವಾಗಿತ್ತು. ಆಗ ಅವರ ತಲೆಯಲ್ಲಿ ಹೊಳೆದದ್ದೇ ಗಡಿಯಾರ ನಿರ್ಮಿಸುವ ಕಾರ್ಖಾನೆ ಸ್ಥಾಪಿಸಬೇಕೆಂಬ ತೀರ್ಮಾನ.
ಬಾಡಿಗೆ ಮನೆಯಲ್ಲಿಯೇ ಅಜಂತಾ ಟ್ರಾನ್ಸಿಸ್ಟರ್ ಕ್ಲಾಕ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯನ್ನು 1971ರಲ್ಲಿ ಸ್ಥಾಪಿಸಿಯೇಬಿಟ್ಟರು. ಆದರೆ, ಸಾಂಪ್ರದಾಯಿಕ ಗೋಡೆಗಡಿಯಾರಗಳ ಸ್ಥಾನವನ್ನು ಕ್ವಾರ್ಟ್ಜ್ ಗಡಿಯಾರಗಳು ಆಕ್ರಮಿಸಿದ್ದು 1980ರಲ್ಲಿ. ಅಜಂತಾ ಕ್ವಾರ್ಟ್ಜ್ ಹೆಸರು ಬಂದಿದ್ದು ಅಂದಿನಿಂದಲೇ. ಈ ಗಡಿಯಾರಗಳು ಸರಳವಾಗಿದ್ದವು, ಸಮಯವನ್ನು ಅತ್ಯಂತ ನಿಖರವಾಗಿ ತೋರಿಸುತ್ತಿದ್ದವು ಮತ್ತು ಕೈಗೆಟಕುವ ದರಕ್ಕೆ ಸಿಗುತ್ತಿದ್ದವು. ಜನಪ್ರಿಯತೆ ಪಡೆಯಲು ಇನ್ನೇನು ಬೇಕಿತ್ತು?
ಉದ್ಯಮ ಜಗತ್ತಿನಾದ್ಯಂತ ವಿಸ್ತರಿಸಿದ್ದರಿಂದ ಶ್ರೀಮಂತಿಕೆಯ ಮದದಿಂದ ಪಟೇಲ್ ಅವರು ಬೀಗಲಿಲ್ಲ. ಬದಲಿಗೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಲಾಭದಿಂದ ಬಂದ ಹಣವನ್ನು ಮತ್ತೆ ಉದ್ಯಮದಲ್ಲಿಯೇ ತೊಡಗಿಸಿದರು. ಅಜಂತಾ ಕ್ವಾರ್ಟ್ಜ್‌ನ ಜನಪ್ರಿಯತೆ ತುಸು ಕುಸಿಯುತ್ತಿದ್ದಂತೆ ಬೇರೆ ಉತ್ಪನ್ನಗಳಲ್ಲಿ ತೊಡಗಿಸಿದರು.
ಅಜಂತಾದಲ್ಲಿ 7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಪಟೇಲ್ ಅವರ ಯಶಸ್ಸಿನ ಗುಟ್ಟು ಕೂಡ ಇದೇ. ಅವರು ಯಾವಾಗಲೂ ಇದೇ ಮಾತನ್ನು ಹೇಳುತ್ತಿದ್ದರು. ಅದೇನೆಂದರೆ, ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಸಾಮರ್ಥ್ಯವುಳ್ಳವರು. [Photo : Mint]












Click it and Unblock the Notifications