ಪ್ರತ್ಯೇಕ ರಾಜ್ಯದ ಬಗ್ಗೆ ಉಮೇಶ್ ಕತ್ತಿ ಸ್ಪಷ್ಟನೆ

ನಾನು ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. 2020ರ ವೇಳೆಗೆ ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳ ಸಂಖ್ಯೆ 50ಕ್ಕೇರಲಿದೆ. ಅ ವೇಳೆಗೆ ಉತ್ತರ ಕರ್ನಾಟಕ ಕೂಡಾ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮುವುದು ಅನಿವಾರ್ಯ ಎಂದಿದ್ದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ಈಗಲೂ ಹೇಳುತ್ತೇನೆ. ಇದು ಅನಿವಾರ್ಯ ಹೊರತೂ ನನ್ನ ಸ್ವಾರ್ಥದ ಹೇಳಿಕೆಯಲ್ಲ.
ನಾನು ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಒಡ್ಡುತ್ತೇನೆ ಹಾಗೂ ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆಗಾಗಿ ಹೋರಾಟ ನಡೆಸಿ ಅದರ ಮುಂದಾಳತ್ವ ವಹಿಸುತ್ತೇನೆ ಎಂದು ಹೇಳಿಲ್ಲ. ಉತ್ತರ ಕರ್ನಾಟಕ ರಾಜ್ಯ ಕಟ್ಟಿ ಅದರ ಸಿಎಂ ಆಗಲಿದ್ದೇನೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ವೀರರಾಣಿ ಚೆನ್ನಮ್ಮನ ನಾಡು, ಬಸವಣ್ಣನ ಅವರ ಕರ್ಮಭೂಮಿ, ಕೃಷೆಯ ಮಡಿಲು ಸೇರಿ ಕಲ್ಯಾಣ ಕರ್ನಾಟಕ ಹೊರ ಹೊಮ್ಮಬೇಕು. ಬೆಳಗಾವಿ, ಗುಲ್ಬರ್ಗಾ, ಮಹಾರಾಷ್ಟ್ರದ ಕೊಲ್ಲಾಪುರ, ಬಿಜಾಪುರ, ಬೀದರ್ ಹಾಗೂ ಗೋವಾ ರಾಜ್ಯದ ಕೆಲ ಭಾಗಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ಸ್ಥಾಪನೆ ಕನಸು ನನಗಿದೆ ಎಂದು ಉಮೇಶ್ ಕತ್ತಿ ಹೇಳಿದ್ದರು.
ಆಡಳಿತದ ಅನುಕೂಲಕ್ಕಾಗಿ ಕೊಲ್ಲಾಪುರದಲ್ಲಿ ಸುವರ್ಣಸೌಧ ನಿರ್ಮಾಣ ಮಾಡುವ ಕನಸು ಕೂಡಾ ಕಂಡಿರುವುದಾಗಿ ಕತ್ತಿ ಸಾಹೇಬ್ರು ಹೇಳಿದ್ದರು. ಬೆಳಗಾವಿ, ಗೋವಾ ಭಾಗಗಳನ್ನು ಸೇರಿಸಿಕೊಳ್ಳುವ ಮೂಲಕ ಭಾಷೆ, ಗಡಿ, ಜಾತಿ ಸಮಸ್ಯೆ, ವಿವಾದಕ್ಕೆ ಕೊನೆ ಹಾಡುವ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ ಎಂದು ಕತ್ತಿ ಹೇಳಿದ್ದರು.
ಗುರುವಾರ ಕತ್ತಿ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಸುರೇಶ್ ಅಂಗಡಿ, ಶಾಸಕ ಧುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಯತ್ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಉಪಸ್ಥಿತರಿದ್ದು, ಕತ್ತಿ ಮಾತಿಗೆ ತಲೆದೂಗಿದ್ದರು.












Click it and Unblock the Notifications