ಬೆಂಗಳೂರಿಗೆ ತಂಪಿನ ಸಿಂಚನ ನೀಡಿದ ಅಕ್ಟೋಬರ್ ಮಳೆ

ಇದರ ಪ್ರಭಾವೇ ಬೆಂಗಳೂರಿನಲ್ಲಿ ಆಕ್ರಮಿಸಿಕೊಂಡಿರುವ ಮೋಡಗಳು ಮತ್ತು ಜಿಟಿಜಿಟಿ ಮಳೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಾಗಿದ್ದು, ತಂಪನೆಯ ವಾತಾವರಣವನ್ನು ಸೃಷ್ಟಿಸಿದೆ. ಮಳೆ ಬೆಂಗಳೂರಿನ ತಾಪಮಾನವನ್ನು ಸಾಕಷ್ಟು ತಗ್ಗಿಸಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಮತ್ತು ಕನಿಷ್ಠ ತಾಪಮಾನ 20 ಸೆಲ್ಶಿಯಸ್ಸಿಗೆ ಇಳಿದಿದೆ.
ಬೆಳಗಿನಿಂದಲೂ ಅಲ್ಲಲ್ಲಿ ಮೋಡಗಳು ಆಗಸದಲ್ಲಿ ಆಟವಾಡಿಕೊಂಡಿದ್ದರೂ ಮಳೆಯಾಗುತ್ತದೆಂದು ನಿರೀಕ್ಷಿಸಿರಲಿಲ್ಲ. ಮಳೆ ಸುರಿದಿದ್ದು ಅನಿರೀಕ್ಷಿತ ಮತ್ತು ಅಲ್ಪವಾದರೂ ಸಂತಸದ ಜೊತೆ ಸಂಕಟವನ್ನೂ ತಂದಿದೆ. ನಗರದ ಅನೇಕ ಭಾಗಗಳಲ್ಲಿ ಸಣ್ಣಗುಡ್ಡದಂತಾಗಿರುವ ತಿಪ್ಪೆಗುಂಡಿಗಳು ಈ ಮಳೆಯಿಂದಾಗಿ ಅಕ್ಕಪಕ್ಕದವರ ಬದುಕನ್ನು ಇನ್ನೂ ಅಸಹನೀಯ ಮಾಡಲಿರುವುದು ನಿಶ್ಚಿತ.
ಅಲ್ಲದೆ, ಈ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವುದರಿಂದ, ಈ ಕಸದ ರಾಶಿಯಿಂದ ಅನೇಕ ರೋಗಗಳ ಹರಡುವ ಅಪಾಯವೂ ಕಾದಿದೆ. ನಗರದ ಅನೇಕ ಭಾಗಗಳಲ್ಲಿ ಎಂದಿಗಿಂತ ಈಗ ಸೊಳ್ಳೆಗಳ ಪ್ರಮಾಣ ವಿಪರೀತವಾಗಿದೆ. ಸಂಜೆ ಮನೆ ಬಾಗಿಲು ಮುಚ್ಚಿಕೊಂಡೇ ಇರಿ, ಉದ್ದ ತೋಳಿನ ಅಂಗಿ ಹಾಕಿಕೊಂಡು ಅಡ್ಡಾಡಿ ಎಂದು ಅನೇಕ ಸಂದೇಶಗಳು ಕೂಡ ಎಸ್ಎಮ್ಎಸ್ ಮುಖಾಂತರ ರವಾನೆಯಾಗುತ್ತಿವೆ.
ಚೆನ್ನೈನಲ್ಲಿ ಮಳೆಯ ಆಟಾಟೋಪ ವಿಪರೀತವಾಗಿದೆ. ಈಗಾಗಲೆ ವಿದ್ಯುತ್ ಕೇಬಲ್ ಸ್ಪರ್ಶಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಕ್ಕಳಿಗೆ ಶಾಲೆಗೆ ರಜಾ ನೀಡಲಾಗಿದೆ. ಇನ್ನು ಭರ್ಜರಿ ಮಳೆಯಾದರಂತೂ ಚೆನ್ನೈ ರಸ್ತೆಗಳು ಯಾವ ರೂಪ ತಾಳುತ್ತವೆಂದು ವಿವರಿಸಿ ಹೇಳುವ ಅಗತ್ಯವಿಲ್ಲ. ಅಣ್ಣಾ ಸಾಲೈನಂತಹ ಪ್ರದೇಶದಲ್ಲಿಯೇ ರಸ್ತೆಗೆ ಚರಂಡಿ ನೀರೆಲ್ಲ ನುಗ್ಗಿಬಂದು ಹೊರಗೆ ಕಾಲಿಡಲೂ ಅಸಹ್ಯ ಬರುತ್ತದೆ.
ಹವಾಮಾನ ತಜ್ಞರ ಮುನ್ಸೂಚನೆ : ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಸಣ್ಣ ಮಳೆ ಆಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ. ಪುಟ್ಟಣ್ಣ ಅವರು ಮುನ್ಸೂಚನೆ ನೀಡಿದ್ದಾರೆ. ಆದರೆ, ಬೆಂಗಳೂರಿನ ಇಂಥ ಮುನ್ಸೂಚನೆಗಳನ್ನು ತಲೆಕೆಳಗು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಜ್ಯೋತಿಷಿಗಳ ಮುನ್ಸೂಚನೆ : ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರೂ ಹಿಂಗಾರು ಭರ್ಜರಿಯಾಗಿ ಸುರಿಯಲಿದೆ ಎಂದು ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಭೀಕರ ಬರಗಾರ ಆವರಿಸಿಕೊಂಡಿದ್ದರಿಂದ ಶ್ರೀಗಳ ಭವಿಷ್ಯ ನಿಜವಾಗಲಿ ಎಂದು ರಾಜ್ಯದ ಜನತೆ ಆಶಿಸುತ್ತಿದ್ದಾರೆ.
ಕನಿಷ್ಠ ಮತ್ತು ಗರಿಷ್ಠ ತಾಪಮಾನ : ಕರ್ನಾಟಕದ ಉತ್ತರ ಭಾಗದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ದಾಖಲಾಗಿವೆ. ಬಳ್ಳಾರಿಯಲ್ಲಿ 33.8 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನವಿದ್ದರೆ, ಬಿಜಾಪುರದಲ್ಲಿ ಕನಿಷ್ಠ 15.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಚಳಿಗಾಳಿ ಬೀಸಲು ಆರಂಭವಾಗಿದೆ.












Click it and Unblock the Notifications