ಕ್ಲೋರೋಫಾರ್ಮ್ ಹೆಚ್ಚಾಗಿ ಹೇಮಶ್ರೀ ಸಾವು

ಹೇಮಶ್ರೀ ಪತಿ ಸುರೇಂದ್ರ ಬಾಬು ಅವರಿಗೆ ಕ್ಲೋರೋಫಾರ್ಮ್ ಸಿಕ್ಕಿದ್ದು ಹೇಗೆ ಎಂಬುದು ಪತ್ತೆಯಾಗಿದೆ. ಬಳೆಪೇಟೆಯ ಅಂಗಡಿಯೊಂದರಿಂದ ಸುರೇಂದ್ರ ಬಾಬು ಕ್ಲೋರೋಫಾರ್ಮ್ ಖರೀದಿಸಿದಾಗಿ ಒಪ್ಪಿಕೊಂಡಿದ್ದಾರೆ. ಬಳೆಪೇಟೆ ಅಂಗಡಿಯವರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಈ ನಡುವೆ ಸುರೇಂದ್ರ ಬಾಬು ಅವರ ಕಾರು ಚಾಲಕ ಸತೀಶ್ ನಾಪತ್ತೆಯಾಗಿದ್ದು, ಆತ ಪತ್ತೆಯಾಗುವ ಮೊದಲೇ ಪ್ರಕರಣ ಅಂತ್ಯ ಕಾಣುವ ಲಕ್ಷಣಗಳು ಕಂಡು ಬಂದಿದೆ.
ಸಾವು ಸಂಭವಿಸಿದ್ದು ಹೇಗೆ?: ಕ್ಲೋರೋಫಾರ್ಮ್ ಅಂಗಡಿಯವನು ಹಾಗೂ ಸುರೇಂದ್ರಬಾಬು ಹೇಳಿಕೆಯನ್ನು ಪಡೆದ ಪೊಲೀಸರಿಗೆ ಪ್ರಕರಣದಲ್ಲಿ ಪ್ರಮುಖ ಅಂಶ ತಿಳಿದು ಬಂದಿದೆ.
ಅ.7ರ ಭಾನುವಾರ ಮುಂಜಾನೆ ಹೇಮಶ್ರೀಯನ್ನು ಅವರ ಮನೆಯಿಂದ ಕರೆದುಕೊಂಡು ನನ್ನ ಕಾರಿನಲ್ಲೆ ಕರೆದುಕೊಂಡು ಹೋದೆ. ಈ ವೇಳೆಗಾಗಲೇ ಆಕೆಗೆ ಕ್ಲೋರೋಫಾರ್ಮ್ ವಾಸನೆ ತೋರಿಸಿ ಪ್ರಜ್ಞೆ ತಪ್ಪುವಂತೆ ಮಾಡಿದೆ. ನಂತರ ದಾರಿ ಮಧ್ಯೆ ಮೂರ್ನಾಲ್ಕು ಸಾರಿ ಹೇಮಶ್ರೀಗೆ ಎಚ್ಚರವಾದಾಗಲೂ ಅದೇ ರೀತಿ ಕ್ಲೋರೋಫಾಮ್ ನೀಡಿದೆ. ಹೀಗೆ ಹಲವು ಬಾರಿ ಕ್ಲೋರೋಫಾಮ್ ನೀಡಿದ್ದೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಸುರೇಂದ್ರ ಬಾಬು ತಪ್ಪೊಪ್ಪಿಗೆ ನೀಡಿದ್ದಾನೆ.
ಕೊಲೆ ಉದ್ದೇಶ: ಹೇಮಶ್ರೀ ಸಾಯಿಸುವ ಉದ್ದೇಶ ನನಗಿರಲಿಲ್ಲ. ಸಾಯಿಸುವ ಉದ್ದೇಶ ಇದ್ದಿದ್ದರೆ ಇಲ್ಲಿ ತನಕ ಕಾಯಬೇಕಾಗಿಲ್ಲ. ಮದುವೆಯಾದಾಗಿನಿಂದ ಇಲ್ಲಿಯವರೆಗೂ ಆಕೆ ಮೈ ಮುಟ್ಟಲು ಬಿಟ್ಟಿರಲಿಲ್ಲ.
ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿ ಸ್ನೇಹಿತ ಮುರಳಿಗೆ ದೂರವಾಣಿ ಕರೆ ಮಾಡಿ ನಾನು ನನ್ನ ಹೆಂಡ್ತಿ ಬಂದಿದ್ದೇವೆ. ಮೂರ್ನಾಲ್ಕು ದಿನ ನಿಮ್ಮ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಳ್ಳುವುದಾಗಿ ಕೇಳಿ ಕೊಂಡೆ. ಆದರೆ, ಮುರಳಿ ಊರಿನಲ್ಲಿ ಇಲ್ಲದ ಕಾರಣ ತನ್ನ ಕೆಲಸಗಾರರನ್ನು ಕಳುಹಿಸಿ ಅನಂತಪುರದ ಬಸ್ ನಿಲ್ದಾಣದಿಂದ ಫಾರ್ಮ್ ಹೌಸ್‌ಗೆ ಕರೆದುಕೊಂಡು ಹೋದರು.
ಅಲ್ಲಿ, ನನ್ನ ಹೆಂಡ್ತಿಗೆ ವಾಂತಿ ಆಗಿ ಸುಸ್ತಾಗಿದ್ದಾಳೆ ಎಂದು ಹೇಳಿ ಅವರ ಸಹಾಯದಿಂದ ಹೇಮಶ್ರೀಯನ್ನು ಒಳಗೆ ಎತ್ತಿಕೊಂಡು ಹೋದೆ. ಮತ್ತೆ ಬೆಳಗ್ಗೆ ಅಲ್ಲಿದ್ದ ಆಳುಗಳಿಗೆ ಕರೆದು ತಿಂಡಿ ತರುವಂತೆ ಕಿಟಕಿಯಿಂದಲೇ 100 ರು. ಕೊಟ್ಟು ಕಳುಹಿಸಿದೆ.
ಈ ವೇಳೆಗಾಗಲೇ ಫಾರ್ಮ್‌ಹೌಸ್‌ನ ಆಳುಗಳು ರಾತ್ರಿ ಹೇಮಶ್ರೀಯನ್ನು ಎತ್ತಿಕೊಂಡು ರೂಂಗೆ ಬಿಟ್ಟ ವಿಚಾರ ಮುರಳಿಗೆ ತಿಳಿಸಿದ್ದರು. ಮತ್ತೆ ಬೆಳಗ್ಗೆ ಕಿಟಕಿಯಿಂದ ಹಣ ಪಡೆದ ಆಳು ಅನುಮಾನಗೊಂಡು ಹೇಮಶ್ರೀ ಇನ್ನೂ ಎಚ್ಚರಗೊಂಡಿಲ್ಲ. ಇಲ್ಲಿ ಏನೋ ನಡೆಯುತ್ತಿದೆ ಎಂಬ ಮಾಹಿತಿಯನ್ನು ಮುರಳಿಗೆ ತಿಳಿಸಿದ್ದ.
ಕೆಲವೇ ಗಂಟೆಗಳಲ್ಲಿ ಮುರಳಿ ನನಗೆ ಕರೆ ಮಾಡಿ ಏನಾಗಿದೆ ನಿನ್ನ ಹೆಂಡ್ತಿಗೆ ಮೊದಲು ಫಾರ್ಮ್ ಹೌಸ್ ಬಿಟ್ಟು ಹೋಗು ಎಂದು ಸೂಚನೆ ನೀಡಿದ. ಆದರೆ, ಆ ವೇಳೆಗಾಗಲೇ ಕಾರು ಚಾಲಕ ಸತೀಶ್‌ನನ್ನು ಮನೆಗೆ ಕಳುಹಿಸಿದ್ದ ಕಾರಣ ಕಾರು ನನ್ನ ಬಳಿ ಇರಲಿಲ್ಲ. ಇದನ್ನು ತಿಳಿದ ಮುರಳಿ ಆತನೇ ಟ್ಯಾಕ್ಸಿ ಮಾಡಿ ಬೆಂಗಳೂರಿಗೆ ಕಳುಹಿಸಿದ. ಅಲ್ಲಿಂದ ನಾನು ನೇರ ಬಂದು ಖಾಸಗಿ ಆಸ್ಪತ್ರೆಗೆ ಹೇಮಶ್ರೀಯನ್ನು ದಾಖಲಿಸಿದೆ. ಮುಂದಿನದ್ದು ನಿಮಗೆ ತಿಳಿದಿದೆ ಎಂದು ಸುರೇಂದ್ರಬಾಬು ಹೇಳಿಕೆ ನೀಡಿದ್ದಾನೆ.












Click it and Unblock the Notifications