ತಾಕತ್ತಿದ್ರೆ ಕಿತ್ತಾಕಿ : ಬಿಜೆಪಿಗೆ ಯಡಿಯೂರಪ್ಪ ಚಾಲೇಂಜ್

Yeddyuappa challenges BJP to kick him out
ಬೆಂಗಳೂರು, ಅ. 16 : ಧನಂಜಯ್ ಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಬಿಜೆಪಿ ಪಕ್ಷದಿಂದ ಉಚ್ಚಾಟನೆ ನಡೆಸಿದ ಬೆನ್ನಹಿಂದೆಯೇ, ತಾಕತ್ತಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಜರುಗಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ ಕುಳಿತು ಬಿಜೆಪಿ ಹೈಕಮಾಂಡಿಗೆ ಮಂಗಳವಾರ ನೇರವಾಗಿ ಸೆಡ್ಡು ಹೊಡೆದಿದ್ದಾರೆ.

ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುವುದೇ ಪಕ್ಷವಿರೋಧಿ ಚಟುವಟಿಕೆಯಾದರೆ ಯಡಿಯೂರಪ್ಪ ಅವರು ನಾಯಕರನ್ನು ಯದ್ವಾತದ್ವಾ ಟೀಕಿಸುವ ಕೆಲಸವನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಆದರೂ, ಯಡಿಯೂರಪ್ಪನವರ ಕೂದಲು ಕೂಡ ಕೊಂಕಿಸುವ ಧೈರ್ಯ ಬಿಜೆಪಿ ಹೈಕಮಾಂಡ್ ತೋರಿಲ್ಲ ಎಂಬುದು ಅಷ್ಟೇ ಸತ್ಯ ಸಂಗತಿ.

ಕೆಲ ದಿನಗಳ ಹಿಂದೆ ಪಕ್ಷದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಶಮನಗೊಳಿಸಲು ಬಂದಿದ್ದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು, ಯಡಿಯೂರಪ್ಪನವರನ್ನು ಹೇಗಾದರೂ ಮಾಡಿ ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ರಾಜ್ಯದ ನಾಯಕರಿಗೆ ಕಿವಿಮಾತು ಹೇಳಿ ನಿರ್ಗಮಿಸಿದ್ದರು. ಜೇಟ್ಲಿ ಅವರು ಅಕ್ಟೋಬರ್ 2ರಂದು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುವ ಸೌಜನ್ಯವನ್ನೇ ಯಡಿಯೂರಪ್ಪ ತೋರಿರಲಿಲ್ಲ.

ಕರ್ನಾಟಕ ಜನತಾ ಪಕ್ಷ ಸೇರುವುದು ಯಡಿಯೂರಪ್ಪ ಹೆಚ್ಚೂಕಮ್ಮಿ ಖಚಿತವಾಗಿದೆ. ಡಿಸೆಂಬರಲ್ಲಿ ಬಿಜೆಪಿಯಿಂದಲೇ ತೊಲಗುವುದಾಗಿ ಯಡಿಯೂರಪ್ಪ ಯಾವ ಹಿಂಜರಿಕೆಯೂ ಇಲ್ಲದೆ ಹೇಳುತ್ತಿದ್ದಾರೆ. ಬೇಕಿದ್ದರೆ ಶಿಸ್ತು ಕ್ರಮ ಜರುಗಿಸಿ ಎಂದು ಹೈಕಮಾಂಡಿಗೆ ಸೆಡ್ಡುಹೊಡೆದಿದ್ದಾರೆ ಯಡಿಯೂರಪ್ಪ. ಈಗಲೂ ಹೈಕಮಾಂಡ್ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂಬುದು ನಿಚ್ಚಳವಾದ ಮಾತು.

ಬೇಕಿದ್ದರೆ ಶಿಸ್ತುಕ್ರಮ ಜರುಗಿಸಿ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ ಎಂದು ಯಡಿಯೂರಪ್ಪ ಮಂಗಳವಾರ ಸವಾಲು ಹಾಕಿದ್ದಾರೆ. ಪಕ್ಷ ಏನೇ ಮಾಡಲಿ ಬಿಡಲಿ ನಾನು ಮಾತ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಿಗೂ ನನ್ನ ಜನರನ್ನೇ ನಿಲ್ಲಿಸುತ್ತೇನೆ ಎಂದು ಅಕ್ರಮ ಗಣಿಗಾರಿಕೆಯ ಸುಳಿಯಲ್ಲಿ ಮತ್ತೆ ಸಿಲುಕಿರುವ ಯಡಿಯೂರಪ್ಪ ಗುಡುಗಿದ್ದಾರೆ. ಮುಂದಿಟ್ಟಿರುವ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ. ಸದ್ಯದಲ್ಲೇ ಹೊಸ ಪಕ್ಷದ ಘೋಷಿಸುವುದಾಗಿ ಹೇಳಿದ್ದಾರೆ.

ಪಂಚ ಪಾಂಡವರ ತಂಡ : ಆದರೆ, ಅವರ ವಿರುದ್ಧ ಕ್ರಮ ಜರುಗಿಸದೆ, ಅವರಾಗಿಯೇ ಪಕ್ಷ ಬಿಟ್ಟು ಹೋಗಲು ಬಾಗಿಲನ್ನು ಪಕ್ಷವೇ ಮುಕ್ತವಾಗಿ ತೆರೆದಿದೆ. ತಮ್ಮದೇ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಯಡಿಯೂರಪ್ಪನವರ ವಾದಕ್ಕೆ ಪ್ರತಿಯಾಗಿ ಸಾಮೂಹಿಕ ನಾಯಕತ್ವಕ್ಕೆ ಬಿಜೆಪಿ ಹೈಕಮಾಂಡ್ ನಾಂದಿ ಹಾಡಿದೆ. ಈಶ್ವರಪ್ಪ, ಅಶೋಕ್, ಜಗದೀಶ್ ಶೆಟ್ಟರ್, ಅನಂತ್ ಕುಮಾರ್ ಮತ್ತು ಗೋವಿಂದ ಕಾರಜೋಳ ಅವರ ನಾಯಕತ್ವದ ತಂಡ ರಚಿಸಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಸಂದೇಶ ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+