ಬಿಜೆಪಿಯಿಂದ ಧನಂಜಯ್ ಕುಮಾರ್ ಉಚ್ಚಾಟನೆ

ಉಪ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಅಣತಿಯ ಮೇರೆಗೆ ಬಿಜೆಪಿ ಶಿಸ್ತು ಸಮಿತಿ ಸದಸ್ಯ ರಘುನಾಥ ಮಲ್ಕಾಪುರೆ ಅವರು ಧನಂಜಯ್ ಕುಮಾರ್ ಅವರನ್ನು ಬಿಜೆಪಿಯಿಂದ ಕಿತ್ತುಹಾಕಿದ್ದಾರೆ. ಆದರೆ, ರಾಜ್ಯದ ಬಿಜೆಪಿಯ ನಾಯಕರ ವಿರುದ್ಧ ಮತ್ತು ಹೈಕಮಾಂಡ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಆದರೆ, ಧನಂಜಯ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮುಖಾಂತರ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ. ಜೊತೆಗೆ, ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪಕ್ಷ ಬಿಟ್ಟು ತೊರೆಯುವುದಕ್ಕೆ ಒಂದು ಅವಕಾಶವನ್ನೂ ಬಿಜೆಪಿ ಒದಗಿಸಿಕೊಟ್ಟಿದೆ.
ದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದ ಧನಂಜಯ್ ಕುಮಾರ್ ಅವರನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಅವರು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದಿದ್ದರು. ನಂತರ ಅವರ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂದು ಹೇಳಿ, ಏಳು ದಿನಗಳೊಳಗೆ ಉತ್ತರ ನೀಡಬೇಕೆಂದು ಬಿಜೆಪಿ ಶಿಸ್ತು ಸಮಿತಿ ನೋಟೀಸ್ ಕಳುಹಿಸಿತ್ತು.
ಧನಂಜಯ ವಾಗ್ದಾಳಿ : ಮಂಗಳವಾರ ಮಲ್ಲೇಶ್ವರದ ಜನಸಂಪರ್ಕ ಸಮಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಧನಂಜಯ ಕುಮಾರ್ ಅವರು, ಅನಂತ್ ಕುಮಾರ್, ಈಶ್ವರಪ್ಪ, ಸಂತೋಷ್, ಸದಾನಂದ ಗೌಡರು ನಡೆಸುತ್ತಿರುವ ದರ್ಬಾರಿನಿಂದ ಬಿಜೆಪಿ ಸರ್ವನಾಶವಾಗಲಿದೆ ಎಂದು ಟೀಕಿಸಿದ್ದರು. ಬಿಜೆಪಿಯಲ್ಲಿ ವಂಚನೆ, ಮೋಸ ಜಾಸ್ತಿಯಾಗುತ್ತಿದ್ದು, ಸಜ್ಜನರು ದನಿಯೆತ್ತದೇ ಇದ್ದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಮಣ್ಣುಮುಕ್ಕಲಿದೆ ಎಂದು ಅವರು ವಾಗ್ದಾಳಿ ನಡೆಸಿದ್ದರು.
ಕೆಲ ದಿನಗಳ ಹಿಂದೆ, ತಮ್ಮ ಬೆಂಬಲಿಗರನ್ನು ಮುಟ್ಟಿದರೆ ಚೆನ್ನಾಗಿರುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು. ಈಗ, ದೆಹಲಿಯ ಹಿರಿಯ ನಾಯಕರನ್ನು ಭೇಟಿ ಮಾಡಿಬಂದಿರುವ ಈಶ್ವರಪ್ಪ, ಶಿಸ್ತು ಉಲ್ಲಂಘಿಸುತ್ತಿರುವ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದೇ ಸಮಯದಲ್ಲಿ, ನನ್ನ ವಿರುದ್ಧ ಧೈರ್ಯವಿದ್ದರೆ ಶಿಸ್ತು ಕ್ರಮ ಜರುಗಿಸಲಿ ಎಂದು ಯಡಿಯೂರಪ್ಪನವರು ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪನವರನ್ನು ಉಚ್ಚಾಟಿಸುವ ತಾಕತ್ ಇದೆಯೆ?












Click it and Unblock the Notifications