ಬೆ. ಸುವರ್ಣ ವಿಧಾನಸೌಧ: 3 ಸಿಎಂಗಳ ಕನಸಿನ ಸೌಧ
ಬೆಳಗಾವಿ, ಅ.11: ಇಂದು ಬೆಳಗಾವಿಗೆ ಸುದಿನ. ಇಲ್ಲಿನ 'ಸುವರ್ಣ ವಿಧಾನಸೌಧ' ಶಕ್ತಿ ಕೇಂದ್ರವು ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.
ಅತ್ತ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಹೊತ್ತಿನಲ್ಲೇ ಮುಂಬೈ-ಕರ್ನಾಟಕ ಭಾಗದಲ್ಲಿ 'ಸುವರ್ಣ ವಿಧಾನಸೌಧ' ತಲೆಯೆತ್ತಿರುವುದು ಆ ಭಾಗದ ಜನಕ್ಕೆ ಹೆಮ್ಮೆಯ/ ಸಮಾಧಾನಕರ ವಿಷಯವಾಗಿದೆ.
ಹಿರಿಯ ರಾಜಕಾರಣಿ ವೀರಣ್ಣ ಮತ್ತಿಕಟ್ಟಿ ಹೇಳಿರುವಂತೆ ಹೈದರಾಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಭಾಗದ ಜನರಿಗೆ 'ಸುವರ್ಣ ವಿಧಾನಸೌಧ' ರಾಜಕೀಯವಾಗಿ ಹೆಬ್ಬಾಗಿಲು ಆಗಲಿದೆ. ಅಂದ ಹಾಗೆ ಇದು 3 ಸಿಎಂಗಳ ಕನಸಿನ ಸೌಧ. ಅವರೆಲ್ಲ ಇಂದು ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ: ಧರ್ಮಸಿಂಗ್, ಎಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ.

ಬೆಳಗಾವಿ 'ಸುವರ್ಣ ವಿಧಾನಸೌಧ' ಉದ್ಘಾಟನೆಗೆ 15 ಕೋಟಿ: ಬೆಳಗಾವಿ 'ಸುವರ್ಣ ವಿಧಾನಸೌಧ' ಉದ್ಘಾಟನೆಗೆ ದುಬಾರಿ ಎನಿಸಿದರೂ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಕುಂದಾನಗರಿಯನ್ನು ಅಂದಚೆಂದಗೊಳಿಸಲು ನಾನಾ ಇಲಾಖೆಗಳು ಶಕ್ತಿ ಮೀರಿ ಖರ್ಚು ಮಾಡುತ್ತಿವೆ.
ಸುವರ್ಣ ಚತುಷ್ಪಥ ಯೋಜನೆಯಡಿ ನಿರ್ಮಿಸಿರುವ ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿ ಮಹಾನಗರದ ಹೊರ ಭಾಗದಲ್ಲಿ ಹಲಗಾ-ಬಸ್ತವಾಡ ಸಮೀಪ ನಾಲ್ಕು ಅಂತಸ್ತಿನ ಈ ಭವ್ಯ-ದಿವ್ಯ ಕಟ್ಟಡ ತಲೆಯೆತ್ತಿದೆ. ಇದಕ್ಕೆ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2009ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದಾಗ ಆರಂಭಿಕ ಯೋಜನಾ ವೆಚ್ಚವನ್ನು 232 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಕೊನೆಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಾಗ ಯೋಜನಾ ವೆಚ್ಚ 500 ಕೋಟಿ ರೂ. ಗಡಿ ದಾಟಿದೆ.
ನೆರೆ'ಹೊರೆ'ಯ ರಾಜ್ಯದ ಅನಗತ್ಯ ವ್ಯಾಜ್ಯದ ನಡುವೆ ಬೆಳಗಾವಿ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಲು ಹೆಗ್ಗುರುತಾಗಿ ಕರ್ನಾಟಕ ಈ ಸೌಧವನ್ನು ನಿರ್ಮಿಸಿದೆ. 2007ರಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಯೋಜನೆಗೆ ಗಣ ಬಿಡುಗಡೆ ಮಾಡಿದ್ದರು.
ಕುತೂಹಲಕಾರಿ ಸಂಗತಿಯೆಂದರೆ ಎನ್ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ 'ಸುವರ್ಣ ವಿಧಾನಸೌಧ' ನಿರ್ಮಾಣ ಮೊಳಕೆಯೊಡೆದಿದ್ದು. ಆದರೆ ಶಂಕುಸ್ಥಾಪನೆ ಮಾಡಿದ್ದು ಎಚ್ ಡಿ ಕುಮಾರಸ್ವಾಮಿ ಅವರು.
ಆದರೆ ವಿಳಂಬವಾಗಿ 2009ರ ಆಗಸ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಪೂನಾದ B.G. Shirke Construction Technology Pvt. Ltdಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಕರ್ನಾಟಕ ರಾಜ್ಯ ರಚನೆಯಾದ ಸುವರ್ಣೋತ್ಸವ ನೆನಪಿನಲ್ಲಿ ಈ ಕಟ್ಟಡಕ್ಕೆ ಸುವರ್ಣ ವಿಧಾನ ಸೌಧ ಎಂದು ಅರ್ಥಪೂರ್ಣವಾಗಿ ಹೆಸರಿಸಲಾಗಿದೆ.
ಬೆಂಗಳೂರಿನ VTN Creative Art Studio ಸಂಸ್ಥೆ ಸೌಧದ ತಲೆಯ ಮೇಲೆ ಅಶೋಕ ಚಕ್ರವನ್ನು ನಿರ್ಮಿಸಿದೆ. 3.68x2.11 ಮೀಟರ್ ಉದ್ದಗಲದ 6.5 ಟನ್ ತೂಕದ ನಿರ್ಮಾಣ ಇದಾಗಿದೆ.
ಬೆಂಗಳೂರಿನ ಹೆಸರಘಟ್ಟ ಬಳಿಯ ಕಲ್ಲುಬಂಡೆಗಳನ್ನು ಬಳಸಲಾಗಿದೆ. ಖಾನಾಪುರ ಗ್ರಾನೈಟ್ ಹಾಸುಗಲ್ಲುಗಳಾಗಿವೆ. ಬರ್ಮಾ ಟೀಕ್ ವುಡ್ ನಲ್ಲಿ ಮರಗೆಲಸವಾಗಿದೆ. 12 ಕಿಮೀ ದೂರದಲ್ಲಿರುವ ಹಿಡಕಲ್ ಅಣೆಕಟ್ಟೆಯಿಂದ ನೀರು ಸರಬರಾಜು ನಡೆದಿದೆ.












Click it and Unblock the Notifications