ಭಾರತ್ ಬೀಡೀಸ್ ಮಾಲೀಕ ಗಣಪತಿ ಪೈ ನಿಧನ

ಭಾರತ್ ಬೀಡಿ ಸಂಸ್ಥೆಯ ಸಂಸ್ಥಾಪಕ ಬಿ ಮಂಜುನಾಥ ಪೈ ಅವರ ಹಿರಿಯ ಮಗನಾಗಿದ್ದ 1954 ರಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. Bharath Bidi Works Pvt Ltd ಖ್ಯಾತ 30 ಬ್ರ್ಯಾಂಡ್ ಬೀಡಿಗಳ ತಯಾರಿಸುವ ಸಂಸ್ಥೆಯಾಗಿತ್ತು. ಬೀಡಿ ಉದ್ಯಮ ಮೇರು ಶಿಖರವೇರಲು ಗಣಪತಿ ಪೈ ಅವರು ಅವಿರತ ಶ್ರಮಿಸಿದ್ದರು.
ಸೋದರರಾದ ದಾಮೋದರ ಪೈ ಮತ್ತು ಮಾಧವ ಪೈ ಅವರೂ ಸಹ ಗಣಪತಿ ಪೈ ಅವರಿಗೆ ಉದ್ಯಮದಲ್ಲಿ ಹೆಗಲು ಕೊಟ್ಟಿದ್ದರು. ಆದರೆ ಅಪ್ಪ ಮತ್ತು ಇಬ್ಬರು ಸೋದರರ ನಿಧನಾನಂತರ ಗಣಪತಿ ಪೈ ಅವರು ಏಕಾಂಗಿಯಾಗಿ ತಮ್ಮ ಮನೆತನ ಉದ್ಯಮದ ಸಾಫಲ್ಯಕ್ಕೆ ಕಾರಣಕರ್ತರಾಗಿದ್ದರು.
ಮೃತ ಗಣಪತಿ ಪೈ ಅವರು ಪತ್ನಿ ಗೀತಾ, ಪುತ್ರರಾದ ಅನಂತ್ ಮತ್ತು ಆನಂದ್, ಪುತ್ರಿಯರಾದ ರೂಪಾ ವಿ ನಾಯಕ್ ಹಾಗೂ ರೇಕಾ ಡಿ ಕಿಣಿ ಅವರನ್ನು ಅಗಲಿದ್ದಾರೆ. ಗಣಪತಿ ಪೈ ಅವರ ಪುತ್ರರಾದ ಅನಂತ್ ಮತ್ತು ಆನಂದ್ ಅಹ ಮನೆತನದ ಉದ್ಯಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ಧಾರ್ಮಿಕ-ಸಾಂಸ್ಕೃತಿಕ: ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸದಾಶಯಗಳಿಗೆ ಗಣಪತಿ ಪೈ ನಿರಂತರವಾಗಿ ಸ್ಪಂದಿಸುತ್ತಿದ್ದರು. ಭಾರತ್ ಬೀಡೀಸ್‌ನ ಬೆಳ್ಳಿಹಬ್ಬ, ಚಿನ್ನದ ಹಬ್ಬ, ವಜ್ರ ಮಹೋತ್ಸವ, ಅಮೃತ ಮಹೋತ್ಸವ, ಸಂಸ್ಥಾಪಕರ ಜನ್ಮಶತಾಬ್ದ ಮುಂತಾದ ಸಂದರ್ಭಗಳಲ್ಲಿ ವಿಶೇಷವಾಗಿ ಮತ್ತು ಸಾಮಾನ್ಯ ಸ್ವರೂಪಗಳಲ್ಲಿ ನಿರಂತರವಾಗಿ ಸಾಮಾಜಿಕ ಸೇವಾ ಯೋಜನೆಗಳನ್ನು ಅನುಷ್ಠಾನಿಸುತ್ತಿದ್ದರು.
ಹಿರಿಯರ ಊರಾದ ದುರ್ಗ ತೆಳ್ಳಾರಿನಲ್ಲಿ ಮಂಜುನಾಥ ಪೈ ಪ್ರೌಢಶಾಲೆ, ಕಾರ್ಕಳದಲ್ಲಿ ಸರಕಾರೀ ಕಾಲೇಜು ಸ್ಥಾಪನೆಗೆ ಮಂಜುನಾಥ ಪೈ ಸ್ಮರಣಾರ್ಥ ದೇಣಿಗೆ, ಮಂಜುನಾಥ ಪೈ ಅವರು ಡಾ. ಟಿ.ಎಂ.ಎ. ಪೈಯವರೊಂದಿಗೆ ಬೆಳೆಸಿದ ಭುವನೇಂದ್ರ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ 50 ಲಕ್ಷ ರೂ. ಕೊಡುಗೆ, ಕರಾವಳಿಯ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ಕಾರ್ಕಳ ಪುರಸಭಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ, ಕಾರ್ಕಳದಲ್ಲಿ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪನೆ ಮತ್ತು ವಿಶಾಲವಾದ ಸಭಾಭವನ ನಿರ್ಮಾಣ ಇತ್ಯಾದಿ ಕೊಡುಗೆಗಳು ಇಲ್ಲಿ ಉಲ್ಲೇಖನೀಯ.
ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಅನನ್ಯ ಭಕ್ತರಾಗಿದ್ದು ವಿಶೇಷ ಕೊಡುಗೆಗಳನ್ನು ಅರ್ಪಿಸಿದ್ದಾರೆ. 50ರ ದಶಕದಲ್ಲಿ ಸರಕಾರಿ ನೌಕರರಿಗೆ ಅನುಕೂಲವಾಗಲು ಕಾರ್ಕಳದಲ್ಲಿ 30 ಮನೆಗಳ ಭಾರತ್ ಬೀಡಿ ಕಾಲನಿ ನಿರ್ಮಿಸಿದರು. ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆಗಳ ಗೌರವದ ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಸ್ತಿ, ಸಮ್ಮಾನ ಸ್ವೀಕರಿಸಿದ್ದಾರೆ. ಭಾರತ್ ಬೀಡೀಸ್ ಉದ್ಯಮ ರಫ್ತು ಸಾಧನೆ ಸಹಿತ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.
ಕಾರ್ಮಿಕ ಸ್ಪಂದನ: ಕಾರ್ಮಿಕರ ಆಶೋತ್ತರಗಳಿಗೆ ಪೈ ಅವರು ಸದಾ ಸ್ಪಂದಿಸುತ್ತಿದ್ದರು. ಅವರು ಅಧ್ಯಕ್ಷರಾಗಿದ್ದ 'ಕಾರ್ಮಿಕರ ವಸತಿ ಮತ್ತು ನಿರ್ಮಾಣ ಸಂಸ್ಥೆಯು ಉಭಯ ಜಿಲ್ಲೆಗಳ ವಿವಿಧೆಡೆ ಕಾರ್ಮಿಕರಿಗೆ ವಸತಿಗಳನ್ನು ನಿರ್ಮಿಸಿಕೊಟ್ಟಿದೆ.
'1982ರಲ್ಲಿ ನನ್ನ ತಂದೆ ನಿಧನಹೊಂದಿದಾಗ ನಾನು ಉದ್ಯಮದಲ್ಲಿ ಏಕಾಂಗಿಯಾದೆ. ಆದರೆ, ನಾನು ಧೃತಿಗೆಡುವಂತಿರಲಿಲ್ಲ. ಉದ್ಯಮ ಬೃಹತ್ ಆಗಿ ಬೆಳೆಯುತ್ತಿತ್ತು. ಲಕ್ಷೋಪಲಕ್ಷ ಕುಟುಂಬಗಳು ನಮ್ಮ ಸಂಸ್ಥೆಯನ್ನೇ ಆಧರಿಸಿಕೊಂಡಿದ್ದವು. ಅವರ ಮನಃಪೂರ್ವಕ ದುಡಿಮೆ, ಸಹೋದ್ಯೋಗಿಗಳ ಪರಿಣತಿ ನನಗೆ ಶಕ್ತಿಯಾಯಿತು. ಉತ್ತಮವಾದ ಮಾನವ ಸಂಪನ್ಮೂಲವೇ ಎಲ್ಲ ಉದ್ಯಮಗಳ ನಿಜವಾದ ಆಸ್ತಿ' ಎಂದು ಅವರು ಹೇಳುತ್ತಿದ್ದರು.












Click it and Unblock the Notifications