ಸುಪ್ರೀಂ ವಿಚಾರಣೆ ಮಧ್ಯಾಹ್ನ 2ಕ್ಕೆ: ನಿರೀಕ್ಷೆಗಳೇನು?

cauvery-row-supreme-court-hearing-karnataka-case-oct-8
ಬೆಂಗಳೂರು, ಅ.8: ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಕರ್ನಾಟಕ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಸೋಮವಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಪಂಚಾಂಗದಲ್ಲಿ ನೋಡಿದರೆ ಇಂದು ಅಷ್ಟಮಿ ಎಂದಿದೆ. ದಿನ ಒಳ್ಳೆಯದೆ. ಆದರೆ ಕರ್ನಾಟಕದ ಗ್ರಹಚಾರ ಹೇಗಿದೆಯೋ? ಎಂಬುದನ್ನು ಬೆಳಗಾವಿಯ ಕಾನೂನು ಮನೆತನದಿಂದ ಬಂದ ನ್ಯಾ, ಲೋಕೂರ್ ಅವರೇ ಹೇಳಬೇಕು. ಏಕೆಂದರೆ ಮತ್ತೊಬ್ಬ ಜಡ್ಜ್ ಜೈನ್ ಜತೆಗೂಡಿ ಕಾವೇರಿ ತೀರ್ಪು ಬರೆಯುವವರು ಇವರೇ. ಮೊದಲೇ ಕರ್ನಾಟಕದ್ದು 'ನಮ್ಮವರೇ ನಮಗೇ ...' ಹಾಡುಪಾಡು.

ಕಾವೇರಿ ನೀರು ಕದಡಿದಾಗಲೆಲ್ಲ ಸುಪ್ರೀಂ ಅಂಗಳದಲ್ಲಿ ಕರ್ನಾಟಕ ಬೇಡದ ಕೂಸು. ಇಂದೂ ಅಷ್ಟೆ, ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟಿನ ಈ ದ್ವಿಸದಸ್ಯ ಪೀಠ ವಜಾಗೊಳಿಸಿದರೆ ರಾಜ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ಕಾವೇರಲಿದೆ. ಒಂದು ವೇಳೆ ರಾಜ್ಯ ಸರಕಾರದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದರೆ ಕಾವೇರಿ ಹೋರಾಟದ ಕಾವು ಶಮನಗೊಳ್ಳಲಿದೆ.

ಆದರೆ ಇದು ಸುಪ್ರೀಂ ನಿರೀಕ್ಷೆಯಷ್ಟೇ. ಹಾಗೆಂದೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನ್ಯಾಯ ದೊರೆಯಲಿದೆ ಎಂದು ಬಾಯಿ ಮಾತಿಗೆ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಮಾನದ ಬಳಿಕ ಸಂಸದರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೃಷ್ಣ -ಶೆಟ್ಟರ್ ಭೇಟಿ: ಕಾವೇರಿ ಚಳವಳಿಯ ಕಾವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ತಮ್ಮ ಅಮೆರಿಕ ಪ್ರವಾಸವನ್ನು ಮೊಟಕುಗೊಳಿಸಿ ಸೋಮವಾರ ದೆಹಲಿಗೆ ದೌಡಾಯಿಸಿದ್ದಾರೆ. ಬಂದವರೇ ಮೊದಲು ಶೆಟ್ಟರ್ ಜತೆ ಮಾತುಕತೆಗೆ ಕುಳಿತಿದ್ದಾರೆ. ನೋಡಬೇಕು ಕೃಷ್ಣ ಅವರಾದರೂ ಕಾಜಿ ನ್ಯಾಯವ ಒದಗಿಸುತ್ತಾರಾ?

ಕೃಷ್ಣ ಅವರು ರಾಜ್ಯದ ಇನ್ನೂ ಕೆಲ ಪ್ರಮುಖರಿಗೆ ದೆಹಲಿಗೆ ಬರಲು ಸೂಚಿಸಿದ್ದು, ಎಲ್ಲರ ಜತೆ ಚರ್ಚೆ ನಡೆಸಿದ ನಂತರ ಪ್ರಧಾನಿಯನ್ನು ಭೇಟಿ ಮಾಡಲಿದ್ದಾರೆ. ಹಾಗಾಗಿ, ಟಿ.ಬಿ. ಜಯಚಂದ್ರ, ಡಿ.ಕೆ. ಶಿವಕುಮಾರ್, ಬಿ.ಎಲ್. ಶಂಕರ್, ಪ್ರೊ.ಬಿ.ಕೆ. ಚಂದ್ರಶೇಖರ್ ಸೇರಿದಂತೆ ಇತರರು ಇಂದು ದೆಹಲಿಗೆ ತೆರಳಿದ್ದಾರೆ.

ಸುರೇಶ್‌ ಕುಮಾರ್‌ ಪೀಕಲಾಟವೇನು?
ಕರ್ನಾಟಕದಿಂದ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಕಾನೂನು ಸಚಿವ ಸುರೇಶ್‌ಕುಮಾರ್, ಅಜ್ಞಾತರಾಗಿ ಏಕೆ ಉಳಿದಿದ್ದೀರಿ ಎಂದು ಕೇಳಿದರೆ ಹಲವು ಪ್ರಮುಖ ಸಭೆಗಳಿಗೆ ಸರಕಾರದಿಂದ ನನಗೆ ಆಹ್ವಾನ ಬಂದಿಲ್ಲ. ಆಹ್ವಾನವೇ ಇಲ್ಲದೆ ಸಭೆಗೆ ಹಾಜರಾಗುವುದು ಶಿಷ್ಟಾಚಾರವಲ್ಲ ಎಂದು ಪಾಠ ಮಾಡಿದ್ದಾರೆ.

ಸದಾನಂದ ಜೈಲಿಗೆ ಹೋಗಲು ಸಿದ್ಧ: ಕಾವೇರಿ ವಿಚಾರದಲ್ಲಿ ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಲಿದ್ದು, ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂದಲ್ಲಿ ಸರಕಾರವನ್ನು ಬಲಿ ಕೊಟ್ಟಾದರೂ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಡಲು ಸಿದ್ಧ. ಕರ್ನಾಟಕಕ್ಕೆ ಅನ್ಯಾಯವಾದರೆ ನಮ್ಮ ನಾಯಕರು ಜೈಲಿಗೆ ಹೋಗಲೂ ಸಿದ್ಧರಾಗಬೇಕಾಗುತ್ತದೆ ಎಂದು ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಸುಳ್ಯದಲ್ಲಿ ಹೇಳಿದ್ದಾರೆ.

ಜೈಲಿಗೆ ಹೋಗಲು ಸಿದ್ಧರಾಗಿ: ತೀರ್ಪಿನಲ್ಲಿ ಮತ್ತೆ ರಾಜ್ಯಕ್ಕೆ ಅನ್ಯಾಯವಾದರೆ ಪ್ರತಿಭಟನೆಗೆ ಉಗ್ರರೂಪ ನೀಡುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಎಚ್ಚರಿಸಿದ್ದಾರೆ. ಕಾವೇರಿ ನೀರನ್ನು ಕುಡಿಯುತ್ತಿರುವ ಎಲ್ಲರೂ ಸೋಮವಾರದಿಂದಲೇ ಉಗ್ರ ಹೋರಾಟಕ್ಕೆ ಧುಮುಕಬೇಕು.
ಕಾವೇರಿ ನದಿ ನೀರಿನ ರಕ್ಷಣೆಗೆ ಜೈಲಿಗೆ ತೆರಳಲೂ ಸಿದ್ಧರಾಗಿರಬೇಕು. ನೀರಿನ ಉಳಿವಿಗಾಗಿ ಎಲ್ಲರೂ ಸರ್ವ ತ್ಯಾಗಕ್ಕೂ ಸಿದ್ಧರಾಗಿರಬೇಕೆಂದು ಜಿ.ಮಾದೇಗೌಡ ಜನರಿಗೆ ಕರೆ ನೀಡಿದರು.

ನಮ್ಮ ದೌರ್ಭಾಗ್ಯ- ಪ್ರೊ. ಬರಗೂರು:
ಕಾವೇರಿ ವಿಷಯದಲ್ಲಿ ಎಲ್ಲ ಪಕ್ಷಗಳ ಮುಖಂಡರು ಒಮ್ಮತದ ಹೋರಾಟ ನಡೆಸುವುದನ್ನು ಬಿಟ್ಟು ಪರಸ್ಪರ ಕಚ್ಚಾಡುತ್ತಾ ರಾಜಕೀಯ ಮಾಡುತ್ತಿರುವುದು ನಮ್ಮ ರಾಜ್ಯದ ದೊಡ್ಡ ದೌಭಾರ್ಗ್ಯ ಎಂದು ಹಿರಿಯ ಸಾಹಿತಿ, ನಾಡೋಜ, ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

70-80ರ ದಶಕದಲ್ಲಿ ಒಂದು ಚಳವಳಿ ಹುಟ್ಟಿಕೊಂಡರೆ ಎಲ್ಲ ಮುಖಂಡರು ಸಂಘಟಿತರಾಗುತ್ತಿದ್ದರು. ಆದರೆ, ಇಂದು ಚಳವಳಿಗಳು ಹುಟ್ಟಿಕೊಂಡರೆ ಎಲ್ಲ ಮುಖಂಡರು ಒಂದಾಗಿ ಹೋರಾಡದೆ ವಿಘಟಿತರಾಗಿ ತಮ್ಮದೆ ಗುಂಪುಗಳ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಹೋರಾಟಕ್ಕೆ ಬಲ ಬರುವುದಿಲ್ಲ. ಈಗಲಾದರೂ ಕನ್ನಡಪರ ಹೋರಾಟ ವಿಷಯದಲ್ಲಿ ಸಮರ್ಪಕ ಕಾರ್ಯಸೂಚಿ ರೂಪಿಸಬೇಕು. ಆ ಕಾರ್ಯಸೂಚಿಯಲ್ಲಿ ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ, ನೆಲ-ಜಲ ಹಂಚಿಕೆ ಬಗ್ಗೆ ಸ್ಪಷ್ಟ ನಿರ್ಣಯಗಳಿರಬೇಕು.

ನಾರಾಯಣಗೌಡರ ಹೋರಾಟ ಸ್ವರೂಪ-ತಂತ್ರ ಬದಲು:
ಕಾವೇರಿ ವಿಷಯದ ಶಾಂತಿಯುತವಾಗಿ ಹೋರಾಡುವ ನಮಗೆ ಬೆಲೆ ಇಲ್ಲದಂತಾಗಿದೆ. ಇಂದು ಸುಪ್ರೀಂ ತೀರ್ಪು ವ್ಯತಿರಿಕ್ತವಾಗಿ ಬಂದರೆ ಉಗ್ರ ಸ್ವರೂಪದ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ಕರವೇ ಅಧ್ಯಕ್ಷ ನಾರಾಯಣಗೌಡ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+