ಬುದ್ಧಿ ಹೇಳಿದ್ದಕ್ಕೆ ಮಗ ಮನೆಬಿಟ್ಟ: ಅಪ್ಪ ಪ್ರಾಣಬಿಟ್ಟ

ಭಾನುವಾರ ಯಲಹಂಕದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಹಳೆ ಯಲಹಂಕದ ಕೊಂಡಪ್ಪ ಲೇಔಟ್ ನಿವಾಸಿ ವೆಂಕಟೇಶ್ (45) ಹೃದಯಾಘಾತದಿಂದ ಮೃತಪಟ್ಟವರು. ವೆಂಕಟೇಶ್ ಮತ್ತು ಗಂಗಮ್ಮ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.
ವೆಂಕಟೇಶ್ ಅವರ ಎರಡನೆಯ ಪುತ್ರ ರಮೇಶ ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿದ್ದಾನೆ. ಯಾವುದೇ ವಿದ್ಯಾರ್ಥಿಗೆ 10 ಸ್ಟಾಂಡರ್ಡ್ ಎನ್ನುವುದು ಜೀವನದಲ್ಲಿ ಮಹತ್ವದ ಘಟ್ಟ. ಆದ್ದರಿಂದ ಈ ಪಬ್ಲಿಕ್ ಪರೀಕ್ಷೆಯಲ್ಲಿ ಚೆನ್ನಾಗಿ ಓದಿ, ಜೀವನ ರೂಪಿಸಿಕೊಳ್ಳಲಿ ಎಂಬುದು ಯಾವುದೇ ಅಪ್ಪ-ಅಮ್ಮನ ಸದುದ್ದೇಶ.
ಹಾಗೆಂದೇ, ಮಗ ರಮೇಶನನ್ನು ಕರೆದು ಅಪ್ಪ ವೆಂಕಟೇಶ್ ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ರಮೇಶ 25 ದಿನಗಳ ಹಿಂದೆ ಮನೆಬಿಟ್ಟು ಹೋದವನು ವಾಪಸಾಗಲಿಲ್ಲ. ಗಾಬರಿಗೆಬಿದ್ದ ಮನೆಯವರು ಎಲ್ಲ ದಿಕ್ಕುಗಳಲ್ಲೂ ಹುಡುಕಾಡಿದ್ದಾರೆ. ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.
ಉಹುಃ ಯಾವುದೇ ಪ್ರಯೋಜನವಾಗಿಲ್ಲ. ಮಗ ಸಿಗಲಿಲ್ಲ/ಬರಲಿಲ್ಲ ಎಂದೇ ಕೊರಗುತ್ತಿದ್ದ ವೆಂಕಟೇಶ್ ಅವರು ನಿನ್ನೆ ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.












Click it and Unblock the Notifications