ಆ.6 : ಕರ್ನಾಟಕ ಬಂದ್ ಗೆ ಭಾರಿ ಬೆಂಬಲ ನಿರೀಕ್ಷೆ

ಅಕ್ಟೋಬರ್ 6 ರ ಕರ್ನಾಟಕ ಬಂದ್ ಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಂಸ್ಥೆಗಳು, ಕನ್ನಡ ಚಿತ್ರೋದ್ಯಮ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಶಾಲಾ, ಕಾಲೇಜು ರಜೆ ಘೋಷಿಸುವ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಇನ್ನೂ ಪ್ರಕಟಣೆ ನೀಡಿಲ್ಲ. ಕೆಲ ಖಾಸಗಿ ಶಾಲೆಗಳು ರಜೆ ನೀಡಲು ಮುಂದಾಗಿವೆ.
ಮೆಡಿಕಲ್ ಶಾಪ್, ಆಸ್ಪತ್ರೆ ತೆಗೆದಿರುತ್ತದೆ. ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚುವ ಸಾಧ್ಯತೆಯಿದೆ. ಬೆಳ್ಳಂಬೆಳ್ಳಗೆ ನಂದಿನ ಹಾಲು, ದಿನಪತ್ರಿಕೆ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆಯಿದೆ. ಕೆಲ ಆಟೋರಿಕ್ಷಾಗಳು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.
ಐಟಿ ಬಿಟಿ ಹಾಗೂ ಬಹುತೇಕ ಖಾಸಗಿ ಸಂಸ್ಥೆಗಳಿಗೆ ಶನಿವಾರ ರಜೆ ದಿನವಾದ್ದರಿಂದ ಬಂದ್ ಬಿಸಿಯಿಂದ ಬಚಾವಾಗಿದ್ದಾರೆ. ಆದರೂ, ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ಲಾಭ ಪಡೆದು ಕೆಲಸ ನಿರ್ವಹಿಸುವ ಸಾಧ್ಯತೆಯಿದೆ.
ಬಂದ್ ಗೆ ಬೆಂಬಲ: ಕಾವೇರಿ ವಿವಾದ ಬಗೆಹರಿಸದೆ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅ.1ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕಿನಿಂದ ರಾಜಭವನದ ವರೆಗೆ ಬೃಹತ್ ರಾಜಭವನ್ ಚಲೋ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆಯ ಪ್ರತಿಕ್ಷಣದ ಮಾಹಿತಿಯನ್ನು ಫೇಸ್ ಬುಕ್ ನ ಪುಟದಲ್ಲಿ ಹಾಕುವ ಮೂಲಕ ಹೆಚ್ಚೆಚ್ಚು ಜನರಿಗೆ ಪ್ರತಿಭಟನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಅತ್ತ ಮೈಸೂರು ಮಂಡ್ಯ ಭಾಗದ ರೈತರು ಹಿರಿಯ ಮುಖಂಡ ಮಾದೇಗೌಡ ಅವರ ನೇತೃತ್ವದಲ್ಲಿ ಕೆಆರ್ ಎಸ್ ಮುತ್ತಿಗೆ, ಅಮರಣಾಂತ ಉಪವಾಸ ಮುಂತಾದ ಪ್ರತಿಭಟನೆ ಜಾರಿಗೊಳ್ಳಲಿದೆ.
ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಸಿ. ಚನ್ನೇಗೌಡ ಅವರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಕರಾರಸಾಸಂ ನ ನಾಲ್ಕುವಿಭಾಗಗಳು ಬಸ್ ಸಂಚಾರ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಲಿದೆ ಎಂದಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಕುಡಿಯುವ ನೀರಿನ ವಿಷಯದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಚಿತ್ರೋದ್ಯಮ ಅ.6 ರಂದು ಸಂಪೂರ್ಣ ಬಂದ್ ಆಚರಿಸಲಿದೆ ಎಂದು ನಿರ್ಮಾಪಕ ಸಾ.ರಾ. ಗೋವಿಂದು ಅವರು ಹೇಳಿದ್ದಾರೆ.












Click it and Unblock the Notifications