ರೈತರಿಂದ ಕೆಆರ್ಎಸ್ ಮುತ್ತಿಗೆ, ಪರಿಸ್ಥಿತಿ ಪ್ರಕ್ಷುಬ್ಧ

ರಾಜ್ಯ ಸರಕಾರದ ನಿಷ್ಕ್ರಿಯತೆಯಿಂದ ರೊಚ್ಚಿಗೆದ್ದಿರುವ ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಂಡ್ಯ ಜಿಲ್ಲೆಯ ಎಲ್ಲ ಮೂಲೆಗಳಿಂದ ಆಗಮಿಸಿರುವ ಸಾರ್ವಜನಿಕರು ಸರಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ತಂತಿ ಬೇಲಿಯನ್ನು ಕಿತ್ತೊಗೆದು ಕೆಆರ್‌ಎಸ್ ಅಣೆಕಟ್ಟೆಯನ್ನು ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದಾರೆ.
ಡ್ಯಾಂ ಪ್ರವೇಶಿಸಲು ಯತ್ನಿಸುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡದೆ ಸಂಯಮದಿಂದ ವರ್ತಿಸುತ್ತಿದ್ದಾರೆ. ಆದರೆ, ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಮಾತಿನ ಚಕಮಕಿ ಮುಂದುವರಿದೇ ಇದೆ. ಪೊಲೀಸರು ಲಾಠಿ ಪ್ರಹಾರವೇನಾದರು ಮಾಡಿದ್ದಲ್ಲಿ ಪ್ರತಿಭಟನಾಕಾರರು ಹಿಂಸೆಗಿಳಿಯುವ ಸಾಧ್ಯತೆಯೂ ಇದೆ.
ಮಾದೇಗೌಡರಿಂದ ಆಮರಣಾಂತ ಉಪವಾಸ : ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ, ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡ ಅವರು ಅ.4 ಗುರುವಾರದಿಂದ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳುವ ನಿರ್ಣಯಕ್ಕೆ ಬಂದಿದ್ದಾರೆ. ಕಾವೇರಿಯನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸದಿದ್ದಲ್ಲಿ ಅವರ ಜೊತೆ ತಾವೂ ಆಮರಣಾಂತ ಉಪವಾಸ ಕುಳಿತುಕೊಳ್ಳುವುದಾಗಿ ಅವರ ಜೊತೆಗಿರುವ ರೈತರು ಬೆದರಿಕೆ ಒಡ್ಡಿದ್ದಾರೆ.
ತಮ್ಮ ಹೋರಾಟಕ್ಕೆ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಉದ್ದೇಶವಿರುವುದರಿಂದ, ಬುಧವಾರ ಸಂಜೆ ನಡೆಯಲಿರುವ ಸಂಪುಟ ಸಭೆಯ ನಂತರ ಉಪವಾಸ ಕುಳಿತುಕೊಳ್ಳುವ ಬಗ್ಗೆ ತಮ್ಮ ಅಂತಿಮ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಸರಕಾರ ತಕ್ಷಣ ನೀರು ಬಿಡುವುದು ನಿಲ್ಲಿಸದಿದ್ದರೆ ಗುರುವಾರದಿಂದ ಉಪವಾಸ ಕೂಡವುದು ಖಚಿತ ಎಂದು ಮಾದೇಗೌಡರು ಹೇಳಿದ್ದಾರೆ.
ಅ. 6 ಕರ್ನಾಟಕ ಬಂದ್ : ಕಾವೇರಿ ಕೊಳ್ಳದಲ್ಲಿ ಸಾಕಷ್ಟು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಾನಾ ಕನ್ನಡಪರ ಸಂಘಟನೆಗಳು ಅಕ್ಟೋಬರ್ 6, ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕಾವೇರಿ ಹೋರಾಟವನ್ನು ಬೆಂಬಲಿಸಿ ಕನ್ನಡ ಚಿತ್ರರಂಗ ಕೂಡ ಅ.6ರಂದು ಬಂದ್ ಆಚರಿಸಲಿದೆ. ಈ ಬಂದ್‌ಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗಳು ಕೂಡ ಬೆಂಬಲ ಸೂಚಿಸಿದ್ದು, ಕರ್ನಾಟಕದಾದ್ಯಂತ ಕಾವೇರಿ ಹೋರಾಟಕ್ಕೆ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದೆ.
ದೆಹಲಿಯಲ್ಲೂ ಪ್ರತಿಭಟನೆ : ಕಾವೇರಿ ನೀರು ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರದ ನೀತಿಯನ್ನು ವಿರೋಧಿಸಿ ಕಬಿನಿ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್‌ನಲ್ಲಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದರು. ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕೂಡಲೆ ಮಧ್ಯ ಪ್ರವೇಶಿಸಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications