ರೈತರಿಂದ ಸರ್ಕಾರಕ್ಕೆ 3 ಗಂಟೆಗಳ ಕಾಲ ಗಡುವು

ಕಾವೇರಿ ನದಿ ಪಾತ್ರದ ಜನರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಇನ್ನು 3 ಗಂಟೆಯೊಳಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ಹೋರಾಟಕ್ಕೆ ಕಾಂಗ್ರೆಸ್ಸಿಗರು: ಹತ್ತು ಹಲವು ರೈತ ಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಮೈಸೂರು ಭಾಗ ಕಾಂಗ್ರೆಸ್ ಮುಖಂಡರು ಬುಧವಾರ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಸಂಸದರಾದ ಎಚ್ ವಿಶ್ವನಾಥ್, ಧ್ರುವ ನಾರಾಯಣ ಹಾಗೂ ಶಾಸಕರಾದ ಸತ್ಯನಾರಾಯಣ ಹಾಗೂ ಮಹದೇವ ಪ್ರಸಾದ್ ಅವರು ಸೇರಿದಂತೆ ಹಲವಾರು ಮುಖಂಡರು ರೈತರ ಜೊತೆ ಕೈಜೋಡಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಹರಿದು ಬರುತ್ತಿದೆ ಜನಸಾಗರ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಕಟ್ಟೆ ಬಳಿಗೆ ಮಂಡ್ಯ, ಮದ್ದೂರು ಭಾಗದ ರೈತರು ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದಾರೆ. ಕೆಆರ್ ಎಸ್ ಬೃಂದಾವನ ದ್ವಾರದ ಬಳಿ ಮಾದೇಗೌಡ ನೇತೃತ್ವದ ರೈತ ಪಡೆ ಬೆಳಗ್ಗಿನಿಂದ ಹೋರಾಟ ನಡೆಸುತ್ತಿದೆ.
ಕಲ್ಲು ತೂರಾಟ: ಈ ನಡುವೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವೆಡೆ ಕಲ್ಲುತೂರಾಟ ನಡೆದಿದೆ.
ಕೆಆರ್ ಎಸ್ ಬಳಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸ್ ಸರ್ಪಗಾವಲು ಒಡ್ಡಿದ್ದ ತಡೆಗೋಡೆಗಳನ್ನು ಮುರಿದ,ರೈತರು ನದಿಗೆ ಎಸೆದಿದ್ದಾರೆ. ಕೆ ಆರ್ ಎಸ್ ಕಡೆ ಮುನ್ನುಗ್ಗಲು ವಿಫಲ ಯತ್ನ ನಡೆಸಿದ ರೈತರನ್ನು ಪೊಲೀಸರು ತಡೆದಿದ್ದಾರೆ.
'ಕನ್ನಂಬಾಡಿ ಕಟ್ಟೆ ನಮ್ಮದು, ಹೋರಾಟ ಮಾಡದೆ ನ್ಯಾಯ ಸಿಗುವುದಿಲ್ಲ. ನಾನಿಲ್ಲದಿದ್ದರೆ ನನ್ನ ಮಕ್ಕಳು, ಮೊಮ್ಮಕ್ಕಳು,ನಮ್ಮ ರೈತಾಪಿ ಜನ ಹೋರಾಟ ನಡೆಸುತ್ತಾರೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಮುಖ್ಯಸ್ಥ ಮಾದೇಗೌಡ ಅವರು ಬೆಳಗ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾವೇರಿ ವಿವಾದ ಬಗೆಹರೆದರೆ ಕುಡಿಯುವ ನೀರು, ರೈತರ ಬೆಳೆಗೆ ನೀರು, ಸಾವಿರ ಮೆಗಾ ವ್ಯಾಟ್ ವಿದ್ಯುತ್ ಎಲ್ಲವೂ ಲಭಿಸುತ್ತದೆ. ಬೆಂಗಳೂರು, ಮೈಸೂರು ನಗರವಾಸಿಗಳು ಎಚ್ಚೆತ್ತುಕೊಳ್ಳಬೇಕು. ರಾಜಕಾರಣಿಗಳು ವೋಟ್ ರಾಜಕೀಯವನ್ನು ಬಿಡಬೇಕು. ಮಾದೇಗೌಡರ ನೇತೃತ್ವದಲ್ಲಿ ಕಾವೇರಿಗಾಗಿ ನಾವು ಸಾಯಲು ಸಿದ್ಧ ಎಂದು ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ಹೇಳಿದ್ದಾರೆ.












Click it and Unblock the Notifications