ತಮಿಳುನಾಡಿಗೆ ಒಂದು ಹನಿ ಕಾವೇರಿ ನೀರು ಬಿಡಲ್ಲ : ಸಿದ್ದು

ತಮ್ಮ 65ನೇ ಹುಟ್ಟುಹಬ್ಬದ ಅಂಗವಾಗಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಕೆಲ ಕಾಲ ಮಾತನಾಡಿದರು.
ಎಐಎಡಿಎಂಕೆ ಪಕ್ಷ ರೈತರ ಹಿತವನ್ನು ಕಾಯುವ ನೆಪವೊಡ್ಡಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ಸೊಪ್ಪು ಹಾಕುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕರ್ನಾಟಕದ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಕಾವೇರಿ ಕೊಳ್ಳದಲ್ಲೆ 43ಕ್ಕೂ ಅಧಿಕ ತಾಲೂಕುಗಳು ಬರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ,
ಕುಡಿಯುವ ನೀರಿಗೆ ತತ್ವಾರವಾಗಿರುವಾಗ ಇನ್ನು ಎಲ್ಲಿಂದ ನೀರು ಬಿಡುವುದು. ನಮ್ಮ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ನಮಗೆ ಸುಮಾರು 155 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಆದರೆ, ಸದ್ಯಕ್ಕೆ 75 ಟಿಎಂಸಿ ಅಡಿ ನೀರು ಮಾತ್ರ ಇದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ತಮಿಳುನಾಡಿಗೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ತಮಿಳುನಾಡಿನಲ್ಲಿ ಮೂರು ಬೆಳೆ ತೆಗೆಯುತ್ತಾರೆ. ನಮ್ಮಲ್ಲಿ ಎರಡು ಬೆಳೆ ತೆಗೆಯಲು ಕಷ್ಟಪಡುತ್ತೇವೆ. ಇಲ್ಲದ ನೀರನ್ನು ಎಲ್ಲಿಂದ ಬಿಡುವುದು. ಕಾವೇರಿ ನದಿ ಪ್ರಾಧಿಕಾರದ ಸೂಚನೆ ವಿರುದ್ಧ ಶೆಟ್ಟರ್ ಅವರ ಸರ್ಕಾರ ಕೈಗೊಂಡ ಕ್ರಮಕ್ಕೆ ನಮ್ಮ ಸಹಮತವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ತಮಿಳು ರೈತರ ಅಳಲು: ಸರಿಯಾದ ನೀರಿಲ್ಲದೆ ಈಗಾಗಲೇ ಕುರುವೈ ಬೆಳೆ ಕಳೆದುಕೊಂಡಿದ್ದೇವೆ. ಈಗ ಸಾಂಬಾ(ಭತ್ತ) ಬೆಳೆ ಉಳಿಸಿಕೊಳ್ಳಲು 120 ದಿನಗಳವರೆಗೂ ನೀರು ಅಗತ್ಯವಿದೆ. ಮೆಟ್ಟೂರು ಡ್ಯಾಂಗೆ ಇನ್ನೂ 75 ಟಿಎಂಸಿ ಅಡಿ ನೀರು ಅಗತ್ಯವಿದೆ.
ಸದ್ಯಕ್ಕೆ ಮೆಟ್ಟೂರು ಅಣೆಕಟ್ಟಿನಲ್ಲಿ 45 tmc ಅಡಿ (thousand million cubic feet) ಮಾತ್ರ ಇದೆ. 10 ಸಾವಿರ ಕ್ಯೂಸೆಕ್ಸ್(cubic feet per second) ನೀರು ಒದಗಿಸಿದರೂ 40 ದಿನಗಳಿಗೆ ಮಾತ್ರ ಸಾಕಾಗುತ್ತದೆ ಎಂದು ತಮಿಳುನಾಡಿನ ಕಾಂಗ್ರೆಸ್ ಸಮಿತಿ(ರೈತ ವಿಭಾಗ) ಹೇಳಿಕೆ ನೀಡಿದೆ.
ಚುನಾವಣೆಗೆ ಸಿದ್ಧತೆ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಸಿದೆ. ಚುನಾವಣೆಗೆ 2 ತಿಂಗಳು ಮೊದಲೇ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ಸಭೆಗಳನ್ನು ನಡೆಸಿ ಆಕಾಂಕ್ಷಿಗಳ ಪಟ್ಟಿ ತಯಾರಿಸಲಾಗುತ್ತಿದೆ.
ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ನಾಯಕರು ಬಹಿರಂಗ ಹೊಡೆದಾಟಕ್ಕಿಳಿದಿದ್ದರ ಬಗ್ಗೆ ಬೇಸರವಿದೆ. ಅಲ್ಲಿನ ನಾಯಕರ ಜೊತೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications