ಮತ್ತೆ ಮತಾಂತರ ಭೂತ,ಪ್ರತಿಭಟನೆಗೆ ಬೆದರಿ ಪಾದ್ರಿ ಪರಾರಿ

ದಲಿತ ಮತ್ತು ಬುಡಕಟ್ಟು ಜನಾಂಗದ ಅಮಾಯಕರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮದ ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಸಮಯದಲ್ಲಿ ಗ್ರಾಮಸ್ಥರು ಇವರನ್ನು ಪತ್ತೆ ಹಚ್ಚಿದ್ದಾರೆ.
ಹಾಸನ ಜಿಲ್ಲೆ ಬೇಳೂರು, ಗಂಡಸಿ, ಜಾವಗಲ್, ಬಾಣಾವರ, ಹಳೇಬೀಡು ಪ್ರದೇಶಗಳಿಂದ ಅರಸೀಕೆರೆ ಬಳಿಯ ಅಣ್ಣನಾಯಕನ ಹಳ್ಳಿಗೆ ಬಂದಿದ್ದ ಸಾವಿರಾರು ಮಂದಿ ಬುಡಕಟ್ಟು ಜನಾಂಗದವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿ ತಡೆದಿದ್ದಾರೆ.
ಗ್ರಾಮಸ್ಥರು ನೀಡಿದ ದೂರಿನನ್ವಯ ಪಾದ್ರಿಗಳು ಬಳಸಿದರೆನ್ನಲಾದ ಮಾರುತಿ ವ್ಯಾನ್, ಟ್ರ್ಯಾಕ್ಟರ್ ಮತ್ತು ಶಾಮಿಯಾನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಅಣ್ಣನಾಯಕನ ಹಳ್ಳಿಯ ಜಮೀನುವೊಂದರಲ್ಲಿ ಮತಾಂತರಕ್ಕಾಗಿ ಎರಡು ದಿನಗಳ ಹಿಂದೆಯೇ ಪಾದ್ರಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ದಲಿತ ಮತ್ತು ಬುಡಕಟ್ಟು ಜನಾಂಗದವರನ್ನು ಕರೆತರಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಟ್ಟೆ, ಊಟ ಮತ್ತು ಐದು ಸಾವಿರ ರೂಪಾಯಿ ನೀಡುವುದಾಗಿ ಕ್ರೈಸ್ತ ಮಿಷನರಿಗಳು ಆಮಿಷವೊಡ್ಡಿದರು. ಆದರೆ ಯಾರಿಗೂ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಳ್ಳಬೇಕೆಂದು ತಿಳಿದಿರಲಿಲ್ಲ ಎನ್ನಲಾಗಿದೆ.
ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಬಟ್ಟೆ, ಊಟ ನೀಡಿ ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಪಾದ್ರಿಗಳು ಕ್ರೈಸ್ತ ಧರ್ಮದ ಬಗ್ಗೆ ಭೋದನೆ ಆರಂಭಿಸಿದ್ದಾರೆ.
ಆ ಸಮಯದಲ್ಲಿ ಕೆಲ ಮುಖಂಡರ ಜೊತೆ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ಬಂದ ಗ್ರಾಮಸ್ಥರು ಮತಾಂತರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಪಾದ್ರಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.











Click it and Unblock the Notifications